ರಾಮನಗರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಜ್ಞಾನ ವೃದ್ಧಿಸಲು ಜಿಲ್ಲೆಯ ಸಂಕಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದರು.
ಇಂದು ಮಾಗಡಿ ತಾಲೂಕಿನ ಸಂಕಿಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಜ್ಞಾನಭರಿತವಾದಾಗ ಸಮಾನತೆ ನೆಲೆಸುತ್ತದೆ, ದೇಶ ಅಭಿವೃದ್ಧಿಯಾಗುತ್ತದೆ. 21ನೇ ಶತಮಾನದಲ್ಲಿ ಜ್ಞಾನ ಅತಿ ಎತ್ತರದ ಸ್ಥಾನ ಪಡೆದುಕೊಂಡಿದೆ. ಸಮಾಜದಲ್ಲಿ ಬಡವ-ಶ್ರೀಮಂತರೆನ್ನದೆ ಎಲ್ಲರಿಗೂ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣ ದೊರಕಬೇಕು ಎಂದರು.
ಗ್ರಾ.ಪಂಚಾಯಿತಿಯಲ್ಲಿ ಪ್ರಾರಂಭಿಸಿರುವ ಪಬ್ಲಿಕ್ ಶಾಲೆಯಿಂದ ಶಿಕ್ಷಣದಲ್ಲಿ ಉಂಟಾಗುವ ಬದಲಾವಣೆಯನ್ನು ಜನರು ಕೆಲವು ವರ್ಷದಲ್ಲಿ ನೋಡಬಹುದು. ಶಿಕ್ಷಣದ ಜೊತೆ ಜ್ಞಾನ, ಕೌಶಲ್ಯತೆ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಕೃಷಿ, ಸ್ವ ಉದ್ಯೋಗ ಸೇರಿದಂತೆ ಯಾವುದೇ ಉದ್ಯೋಗದ ಕ್ಷೇತ್ರದಲ್ಲೂ ಆರ್ಥಿಕವಾಗಿ ಸದೃಢವಾಗುವುದರೊಂದಿಗೆ ಉತ್ತಮ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಸಂಕಿಘಟ್ಟದಲ್ಲಿರುವ ಗ್ರಾಮ ಪಂಚಾಯತ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ರೀತಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ಲ್ಯಾಬ್, ಆಟದ ಮೈದಾನ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಶಿಕ್ಷಕರು ಸೇರಿದಂತೆ ಯಾವುದೇ ಕೊರತೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ಜ್ಞಾನರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಕುದುರೆ ವ್ಯಾಪಾರದಿಂದ ಬಿಜೆಪಿಗೆ ಅಧಿಕಾರ : ತಿಮ್ಮಾಪೂರ್ ಟೀಕೆ