ರಾಮನಗರ: ಅಣ್ಣಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ನೂತನ ಕಾರ್ಯದರ್ಶಿಯಾಗಿ ನಿತ್ಯಾನಂದ ಅವರ ನೇಮಕ ಖಂಡಿಸಿ, ಗ್ರಾಮದ ಹಾಲು ಉತ್ಪಾದಕರು ನಗರದ ಐಜೂರು ವೃತ್ತದಲ್ಲಿ ಸೋಮವಾರ ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಹಸುಗಳನ್ನು ಕರೆತಂದು ಕೆಲ ಹೊತ್ತು ರಸ್ತೆ ತಡೆ ನಡೆಸಿದರು.
ಕಾರ್ಯದರ್ಶಿ ನೇಮಕದ ಹಿಂದೆ ಬಮೂಲ್ ನಿರ್ದೇಶಕ ಪಿ ನಾಗರಾಜ್ ಕೈವಾಡವಿದ್ದು, ಸಂಘದ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದರು. ನಂತರ ಪ್ರತಿಭಟನಾಕಾರರು ನಾಗರಾಜ್ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆದರು. ಹೊಸ ಕಾರ್ಯದರ್ಶಿ ನೇಮಕವನ್ನು ಕೂಡಲೇ ರದ್ದುಪಡಿಸಬೇಕು. ಸಂಘಕ್ಕೆ ಈಗಿರುವ ಪ್ರಭಾರ ಕಾರ್ಯದರ್ಶಿ ರಾಜಕುಮಾರ್ ಅವರನ್ನೇ ಮುಂದುವರಿಸಬೇಕು. ಕೂಡಲೇ ಸಂಘಕ್ಕೆ ಚುನಾವಣೆ ಘೋಷಿಸಬೇಕು. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಆಡಳಿತ ಮಂಡಳಿಯೇ ಕಾರ್ಯದರ್ಶಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೆ ಸಂಘದಲ್ಲಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದ ವ್ಯಕ್ತಿಯ ಸಂಬಂಧಿಯನ್ನೇ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಈಗಿನ ನಿತ್ಯಾನಂದ ಅವರ ನೇಮಕದ ಹಿಂದೆ ಅಂದಿನ ಅಕ್ರಮ ಮುಚ್ಚಿ ಹಾಕುವ ಸಂಚಿದೆ. ಇದರಿಂದಾಗಿ ಸಂಘದ ಆಡಳಿತವು ಹಾದಿ ತಪ್ಪಲಿದೆ ಎಂದು ದೂರಿದರು.
ಸಂಘಕ್ಕೆ ಕಾರ್ಯದರ್ಶಿ ನೇಮಕ ಮಾಡುವ ಕುರಿತು ಗ್ರಾಮದಲ್ಲಿ ಪರ–ವಿರೋಧ ಚರ್ಚೆ ನಡೆಯುತ್ತಲೇ ಇದ್ದು, ಇದೀಗ ಪ್ರತಿಭಟನೆಯ ರೂಪ ತಾಳಿದೆ. ಭಾನುವಾರ ಸಹ ಸಂಘದ ಎದುರು ಕೆಲವರು ಹಾಲು ಸುರಿದು ಪ್ರತಿಭಟನೆ ನಡೆಸಿದ್ದರು. ಇದೀಗ, ಜಿಲ್ಲಾಕೇಂದ್ರಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಜೆಡಿಎಸ್ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ಸಂಘಕ್ಕೆ 13 ವರ್ಷಗಳಿಂದ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ, ಆಡಳಿತಾಧಿಕಾರಿ ಮೇಲ್ವಿಚಾರಣೆಯಲ್ಲಿ ಸಂಘ ನಡೆಯುತ್ತಿದೆ.
ಇದನ್ನೂ ಓದಿ: ಬರ ಅಧ್ಯಯನಕ್ಕೆ ಬಂದಿದ್ದೇನೆ, ಬೂಟಾಟಿಕೆ ಮಾಡಲು ಬಂದಿಲ್ಲ: ಬಿ ವೈ ವಿಜಯೇಂದ್ರ