ರಾಮನಗರ: ವಿಧಾನ ಪರಿಷತ್ ಬಿಜೆಪಿ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಬಾವನ ಕೊಲೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಎಡಿಜಿಪಿ ಹಿತೇಂದ್ರ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸಿಐಡಿ ಪೊಲೀಸರು ಚನ್ನಪಟ್ಟಣ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ವಶಕ್ಕೆ ಪಡೆಯಲಿದ್ದಾರೆ. ಸಿಐಡಿ ಡಿವೈಎಸ್ಪಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಸಿಐಡಿ ತಂಡ ಆಗಮಿಸಿದ್ದು, ಇಂದೇ ಆರೋಪಿಗಳ ಕಡತ ಸಿಐಡಿಗೆ ಹಸ್ತಾಂತರವಾಗಲಿದೆ.
ಚನ್ನಪಟ್ಟಣ ಗ್ರಾಮಾಂತರ ಪಿಎಸ್‌ಐ ಕೃಷ್ಣ ನೇತೃತ್ವದಲ್ಲಿ ಮೊದಲ ಆರೋಪಿ ಮುರುಗೇಶ್ (42), 2ನೇ ಆರೋಪಿ ಪ್ರಭಾಕರ್ (27), 3ನೇ ಆರೋಪಿ ಮಧನ್ ಕುಮಾರ್ (33), 4ನೇ ಆರೋಪಿ ರಾಧ (40) ಎಂಬವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಮೂಲದ ಈ ನಾಲ್ವರು ಆರೋಪಿಗಳು ವಿಚಾರಣೆ ವೇಳೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಪ್ರಕರಣದ ಹಿನ್ನೆೆಲೆ: ಡಿಸೆಂಬರ್ 2ರಂದು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದ ಮಹದೇವಯ್ಯ ನಾಪತ್ತೆಯಾಗಿದ್ದರು. ಅಪಹರಣ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಚನ್ನಪಟ್ಟಣ ಪೊಲೀಸರಿಗೆ ಮಹದೇಶ್ವರ ಬೆಟ್ಟದಲ್ಲಿ ಅವರ ಮೊಬೈಲ್ ಲೊಕೇಶನ್ ಪತ್ತೆಯಾಗಿತ್ತು. ಅಷ್ಟರಲ್ಲಿ ಅವರ ಕಾರು ಹನೂರು ತಾಲೂಕಿನ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಕಂಡುಬಂದಿತ್ತು. ಆದರೆ ಮಹಾದೇವಯ್ಯ ಅವರನ್ನು ಕಿಡ್ನಾಪ್ ಮಾಡಿಕೊಂಡು ರಾಮಾಪುರಕ್ಕೆ ಬಂದಿದ್ದ ಹಂತಕರು 50 ಅಡಿ ಆಳದ ಕಂದಕಕ್ಕೆ ಶವ ಎಸೆದಿದ್ದರು. ಬಳಿಕ ರಾಮಾಪುರದಲ್ಲಿ ಕಾರು ನಿಲ್ಲಿಸಿದ್ದರು. ಬಸ್ ಮೂಲಕ ಹನೂರಿಗೆ ಬಂದು, ಚನ್ನಪಟ್ಟಣಕ್ಕೆ ಹೋಗಿದ್ದರು. ಕೂಂಬಿಂಗ್ ನಡೆಸಿದ ಪೊಲೀಸರಿಗೆ ಡಿಸೆಂಬರ್ 4ರಂದು ರಾಮಾಪುರದಿಂದ 6 ಕಿ.ಮೀ ದೂರದ ಕಂದಕದಲ್ಲಿ ಮೃತದೇಹ ದೊರೆತಿತ್ತು. ನಂತರ ಸುಮಾರು 50 ಅಡಿ ಕಂದಕದಿಂದ ಹರಸಾಹಸಪಟ್ಟು ಮಹಾದೇವಯ್ಯ ಶವ ಹೊರತರಲಾಗಿತ್ತು.
ಇದನ್ನೂ ಓದಿ: ಯೋಗೇಶ್ವರ್ ಬಾವನ ಕೊಲೆ ಕೇಸ್: ರಾಮಪುರ, ಹನೂರಲ್ಲಿ ಸ್ಥಳ ಮಹಜರು, ಟೀ ಶರ್ಟ್ ವಶಕ್ಕೆ