ರಾಮನಗರ: ಕೊರೊನಾ ಮಹಾಮಾರಿ ಬೊಂಬೆ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕು ಬೊಂಬೆ ಉದ್ಯಮಕ್ಕೆ ಹೆಸರುವಾಸಿ. ಇಲ್ಲಿ ತಯಾರಾಗುವ ಬೊಂಬೆಗಳು ಇಡೀ ವಿಶ್ವದಲ್ಲಿಯೇ ಫೇಮಸ್. ಮೊದಲೆಲ್ಲ ಚೀನಾ ಆಟಿಕೆಗಳು ಇಲ್ಲಿಯ ಬೊಂಬೆಗಳು ಪೈಪೋಟಿ ಕೊಡುತ್ತಿದ್ದವು. ಕೊರೊನಾ ವೈರಸ್ನಿಂದಾಗಿ ವಿಶ್ವದಲ್ಲಿ ಎಲ್ಲ ರೀತಿಯ ಉದ್ಯಮಗಳು ನೆಲಕಚ್ಚಿವೆ. ವ್ಯಾಪಾರ, ವ್ಯವಹಾರಗಳು ತಲೆಕೆಳಗಾಗಿವೆ. ಮೊದಲೇ ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದ ಅನೇಕ ಸ್ಥಳೀಯ ಉದ್ಯಮಗಳು ಈಗ ವೈರಸ್ ದಾಳಿಗೆ ಇನ್ನಷ್ಟು ಕಂಗೆಟ್ಟು ಹೋಗಿದ್ದು,ಬೊಂಬೆ ಉದ್ಯಮ ನೆಲಕಚ್ಚಿದೆ.
ಚನ್ನಪಟ್ಟಣ ತಾಲೂಕಿನಾದ್ಯಂತ ಹಲವಾರು ಆಟಿಕೆ ಸಾಮಾನು ತಯಾರಿಕಾ ಕಾರ್ಖಾನೆಗಳಿದ್ದವು, ಆದರೀಗ ಬೆರಳೆಣಿಕೆಯಷ್ಟಾಗಿವೆ. ಕಾರ್ಮಿಕರ ಸಂಖ್ಯೆ ಕೂಡ ಈಗ ಮೂರ್ನಾಲ್ಕು ಸಾವಿರಕ್ಕೆ ಇಳಿದಿದೆ. ಹಲವು ವರ್ಷಗಳಿಂದ ಚೀನಾದ ಕೆಮಿಕಲ್ ಮಿಶ್ರಿತ ಬಣ್ಣದ ಅಲಂಕಾರಿ, ಆಟಿಕೆ ಸಾಮಗ್ರಿಗಳ ಜೊತೆ ಪೈಪೋಟಿ ಕೊಡಲಾಗದೇ ಮಂದಗತಿಯಲ್ಲಿ ಸೊರಗಿ ನಶಿಸುವ ಹಂತಕ್ಕೆ ಚನ್ನಪಟ್ಟಣ ಗೊಂಬೆಗಳ ಉದ್ಯಮಗಳು ತಲುಪಿದೆ.
ಆದ್ರೀಗ ಕೊರೊನಾದಿಂದಾಗಿ ಚೀನಾದಿಂದ ಭಾರತಕ್ಕೆ ರಫ್ತಾಗುತ್ತಿದ್ದ ಚೀನಾ ಬೊಂಬೆಗಳು ಸದ್ಯಕ್ಕೆ ಸ್ಥಗಿತವಾಗಿದೆ. ಆದರೆ,ಕೊರೊನಾ ಭಯದಿಂದ ಸಂಚರಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದ್ದು,ಬೊಂಬೆಗಳ ವ್ಯಾಪಾರದ ಮೇಲೆ ಸಾಕಷ್ಟು ಪೆಟ್ಟು ಬಿದ್ದಿದೆ. ಹೀಗಾಗಿ ಸರ್ಕಾರಗಳು ಕಷ್ಟದಲ್ಲಿರುವ ಗೊಂಬೆಗಳ ಉದ್ಯಮಕ್ಕೆ ಉತ್ತೇಜನ ನೀಡಬೇಕು. ಆಗ ಮಾತ್ರ ಐತಿಹಾಸಿಕ ಪ್ರಸಿದ್ಧ ಗೊಂಬೆಗಳ ಉದ್ಯಮಕ್ಕೆ ಉಳಿಗಾಲ ಅಂತಿದ್ದಾರೆ ಗೊಂಬೆಗಳ ತಯಾರಕರು.