ರಾಮನಗರ: ಮಹಾತ್ವಾಕಾಂಕ್ಷೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಕೈಗೊಂಡಿರುವ ಪಾದಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ವ - ಕ್ಷೇತ್ರವಾದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ಸಂಗಮದಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪಾದಯಾತ್ರೆಗೆ ಸಜ್ಜುಗೊಳಿಸಲಾಗಿದೆ.
ನಾಳೆ(ಜ.9) ಯಿಂದ ಆರಂಭಗೊಳ್ಳುವ ಪಾದಯಾತ್ರೆಗೆ ತಯಾರಿ ಮಾಡಿಕೊಂಡಿದ್ದಾರೆ. ಕರ್ಫ್ಯೂ ಹಿನ್ನೆಲೆ ಪಾದಯಾತ್ರೆಗೆ ನಿರ್ಬಂಧ ಹೇರಿದ್ದರೂ ಸಂಗಮ ನದಿ ತೀರದಲ್ಲಿಯೇ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಂಗಮ ಬಳಿ ಇರುವ ಮಡಿವಾಳ ಗ್ರಾಮದಲ್ಲಿರುವ ಶಿವಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಪಾದಯಾತ್ರೆ ಆರಂಭವಾಗಲಿದೆ.
ಪಾದಯಾತ್ರೆ ಹಾದು ಹೋಗುವ ರಸ್ತೆಯ ಅಕ್ಕಪಕ್ಕ ಗಿಡಗಂಟೆಗಳನ್ನ ಜೆಸಿಬಿ ಮೂಲಕ ಕಿತ್ತು ಹಾಕುವ ಸ್ವಚ್ಚತೆ ಕಾರ್ಯ ಆರಂಭಗೊಂಡಿದ್ದು, ಮಾರ್ಗ ಮಧ್ಯೆ ಸಿಗುವ ಬಸ್ ನಿಲ್ದಾಣಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದೆ. ಜತೆಗೆ ಪಾದಯಾತ್ರೆ ಸಾಗುವ ಮಾರ್ಗ ಮಧ್ಯದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಈಗಾಗಲೇ ರಾಮನಗರ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿ ನಿಷೇಧಾಜ್ಞೆ ಜಾರಿ ಮಾಡಿದೆ. ನಿಷೇಧಾಜ್ಞೆಗೆ ಕ್ಯಾರೇ ಎನ್ನದ ಕಾಂಗ್ರೆಸ್ ಮುಖಂಡರು ಸಂಗಮದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಪಾದಯಾತ್ರೆಗೆ ಸಜ್ಜುಗೊಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಪ್ರಾರಂಭಿಸುವ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ