ರಾಮನಗರ: ಚನ್ನಪಟ್ಟಣದ ಬೊಂಬೆಗಳೆಂದರೆ ಯಾರಿಗೆ ತಾನೇ ಗೊತ್ತಿಲ್ಲ?. ಆದ್ರೀಗ ಬೊಂಬೆಗಳ ಮಾರುಕಟ್ಟೆ ಸಂಕಷ್ಟದಲ್ಲಿದೆ. ಬೊಂಬೆಗಳು ನೋಡಲು ಸೊಗಸಾಗಿದ್ದರೂ, ಅವುಗಳ ಮಾರಾಟ ಪ್ರಮಾಣದಲ್ಲಿ ಇಳಿಕೆಯಾಗಿದೆ. ಐತಿಹಾಸಿಕ ಚನ್ನಪಟ್ಟಣದ ಬೊಂಬೆಗಳ ಉದ್ಯಮ ಸಂಕಷ್ಟ ಎದುರಿಸುತ್ತಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ‘ವೋಕಲ್ ಫಾರ್ ಲೋಕಲ್’ ಎಂಬ ಘೋಷವಾಕ್ಯದ ಮೂಲಕ ಸ್ವದೇಶಿ ವಸ್ತುಗಳಿಗೆ ಶಕ್ತಿ ನೀಡಿದ್ದರು. ಬೊಂಬೆಗಳ ವರ್ಚುಯಲ್ ಮೇಳದ ಮೂಲಕ ಚನ್ನಪಟ್ಟಣ ಬೊಂಬೆಗಳಿಗೆ ಮಾರುಕಟ್ಟೆ ಕಲ್ಪಿಸಲು ಕೂಡ ಪ್ರಯತ್ನಿಸಿದ್ದರು. ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಚನ್ನಪಟ್ಟಣದ ಬೊಂಬೆಗಳನ್ನು ಖರೀದಿಸಿದ್ದು, ಅವುಗಳನ್ನು ಸೋಲಿಗರ ಹಾಡಿಗಳಲ್ಲಿನ ಶಿಶು ವಿಹಾರದ ಚಿಣ್ಣರಿಗೆ ನೀಡುವ ಮೂಲಕ ಬೊಂಬೆ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಬೊಂಬೆ ಉದ್ಯಮದ ಅಭಿವೃದ್ಧಿ ಹೇಗೆ?
ಚನ್ನಪಟ್ಟಣದ ಕ್ರಾಫ್ಟ್ ವರ್ಕ್ಸ್ ಮಳಿಗೆ ಹಾಗೂ ಬೊಂಬೆ ಉದ್ಯಮಿಗಳಿಂದ ಕ್ರಿಯಾತ್ಮಕ ಆಟಿಕೆಗಳು ತಯಾರಾಗುತ್ತದೆ. ಇದರಲ್ಲಿ ಅಂಕಿ ಸಂಖ್ಯೆಗಳು, ಕಾಗುಣಿತ, ಕಲಿಕೆಗೆ ಪೂರಕವಾದ ಬೊಂಬೆಗಳು, ಮಕ್ಕಳು ಆಟವಾಡಲು ಬೇಕಿರುವ ಬೊಂಬೆಗಳನ್ನು ಕೂಡ ತಯಾರು ಮಾಡಲಾಗುತ್ತದೆ.
ಇವುಗಳಲ್ಲಿ ಇಡೀ ರಾಜ್ಯದಲ್ಲಿನ ಅಂಗನವಾಡಿಗೆ ಪೂರೈಕೆ ಮಾಡುವ ಯೋಜನೆ ರೂಪುಗೊಳ್ಳಬೇಕು. ರಾಜ್ಯದಲ್ಲಿ ಒಂದು ಅಂದಾಜಿನ ಪ್ರಕಾರ 50 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿವೆ. ಪ್ರತಿಯೊಂದು ಅಂಗನವಾಡಿಗೂ ಚನ್ನಪಟ್ಟಣದ ಬೊಂಬೆಗಳ ಆಟಿಕೆಗಳನ್ನು ನೀಡಿದರೆ ಇಲ್ಲಿಯ ಬೊಂಬೆಗಳ ಮಾರುಕಟ್ಟೆ ಕಲ್ಪಿಸುವುದು ಮಾತ್ರವಲ್ಲದೇ, ಮಕ್ಕಳ ಶಿಕ್ಷಣಕ್ಕೂ ಪೂರಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯ ಉದ್ಯಮಿಗಳದ್ದಾಗಿದೆ.
ಕುಶಲ ಕರ್ಮಿಗಳೇ ಇಲ್ಲ
ಅಂದಾಜು 200 ವರ್ಷ ಇತಿಹಾಸವಿರುವ ಈ ಬೊಂಬೆಗಳ ಉದ್ಯಮಕ್ಕೆ ಈಗ ಹೊಡೆತ ಬಿದ್ದಿದೆ. ಚೀನಾ ಆಟಿಕೆಗಳು ಬಂದು ಚನ್ನಪಟ್ಟಣ ಆಟಿಕೆಗಳಿಗೆ ಹೊಡೆತ ಕೊಟ್ಟಿವೆ. ಇದರಿಂದ ಮಾರಾಟ ಕುಸಿತ ಕಂಡಿತು. ಸುಮಾರು 10 ಸಾವಿರಕ್ಕೂ ಅಧಿಕವಿದ್ದ ಕುಶಲಕರ್ಮಿಗಳ ಸಂಖ್ಯೆ ಈಗ 2 ಸಾವಿರ ಅಥವಾ ಅದಕ್ಕೂ ಕೆಳಗೆ ಇಳಿದಿದೆ ಎನ್ನುತ್ತಾರೆ ಬೊಂಬೆ ಉದ್ಯಮಿಗಳು.
ಪ್ರತಿ ವರ್ಷ 5ರಿಂದ 6 ಲಕ್ಷ ಬೊಂಬೆಗಳು ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಕೇವಲ 50 ಸಾವಿರ ಬೊಂಬೆಗಳು ಮಾತ್ರ ಮಾರಾಟವಾಗಿವೆ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಥಳೀಯ ಮಾರುಕಟ್ಟೆ ಬೆಂಬಲಿಸುವ ದೃಷ್ಟಿಯಿಂದ ಜನಪ್ರತಿನಿಗಳು ಈ ರೀತಿ ಬೊಂಬೆಗಳನ್ನು ಖರೀದಿಸಿ ಉಚಿತವಾಗಿ ಮಕ್ಕಳಿಗೆ ಹಂಚುವುದು. ಇವರನ್ನೇ ಅನುಸರಿಸಿ ಇನ್ನೊಂದಷ್ಟು ಮಂದಿ, ಸಂಘಟನೆಗಳು ಸಹ ಚನ್ನಪಟ್ಟಣ ಬೊಂಬೆಗಳ ಖರೀದಿಗೆ ಮನಸ್ಸು ಮಾಡಿದರೆ ಕುಶಲ ಕರ್ಮಿಗಳ ಬದುಕಿಗೆ ನೆರವಾದಂತಾಗುತ್ತದೆ.
ಬೊಂಬೆಗಳ ನಾಡು ಎಂದೇ ಪ್ರಸಿದ್ಧಿಯಾಗಿರುವ ಚನ್ನಪಟ್ಟಣದಲ್ಲಿರುವ ಬೊಂಬೆ ಮಳಿಗೆಗಳು ಇನ್ನಷ್ಟು ಅಭಿವೃದ್ಧಿಗೊಳ್ಳಲು ಸರ್ಕಾರವೇ ಮನಸ್ಸು ಮಾಡಬೇಕಿದೆ. ಇದರೊಂದಿಗೆ ದೊಡ್ಡ ದೊಡ್ಡ ವಿಮಾನ ನಿಲ್ದಾಣಗಳು, ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಹೆದ್ದಾರಿಯಲ್ಲಿ ಚನ್ನಪಟ್ಟಣ ಆಟಿಕೆಗಳ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕಿದೆ.
ಪ್ರವಾಸೋದ್ಯಮ ಮಂತ್ರಿಗಳು ಗಮನ ಹರಿಸಬೇಕು
ಪ್ರಸ್ತುತ ಪ್ರವಾಸೋದ್ಯಮ ಸಚಿವರಾಗಿರುವ ಸಿ.ಪಿ ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಬೊಂಬೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇಲ್ಲ. ಏಕೆಂದ್ರೆ ಸತತ 20 ವರ್ಷಗಳ ಹೆಚ್ಚು ಕಾಲ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬೊಂಬೆಗಳ ಉದ್ಯಮ ಪ್ರೋತ್ಸಾಹಕ್ಕೆ ಅನೇಕ ದಾರಿಗಳಿವೆ. ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೊಂಬೆ ಉದ್ಯಮಕ್ಕೆ ಸಚಿವರು ದಾರಿ ದೀಪವಾಗಬೇಕಿದೆ ಎಂಬುದು ಬೊಂಬೆ ತಯಾರಕರ ಅಭಿಲಾಷೆ.