ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ಪ್ಲೈವುಡ್ ತುಂಬಿದ್ದ ಬೊಲೆರೋ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬಸ್ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಮನಗರ ತಾಲೂಕಿನ ವಿಜಯಪುರ ಗ್ರಾಮದ ಬಳಿ ಇಂದು ಘಟನೆ ನಡೆದಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎಸ್ಆರ್ಟಿಸಿ ಎಲೆಕ್ಟ್ರಿಕ್ ಬಸ್ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಫ್ಲೈವುಡ್ ತುಂಬಿದ್ದ ಬೊಲೆರೋ ವಾಹನ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪ್ರತಿದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೆ ಇದೆ. ಇತ್ತ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Hit and run: ವಿಜಯನಗರ ಜಿಲ್ಲೆಯಲ್ಲಿ ಹಿಟ್ ಆ್ಯಂಡ್ ರನ್ಗೆ ಇಬ್ಬರು ರೈತರು ಬಲಿ
ಮೈಸೂರು- ಬೆಂಗಳೂರು ಹೆದ್ದಾರಿ ರೇಸಿಂಗ್ ಟ್ರ್ಯಾಕ್ ಅಲ್ಲ - ಪ್ರತಾಪ್ ಸಿಂಹ: ಮತ್ತೊಂದೆಡೆ, ಮೈಸೂರು- ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕವಾಗಿದ್ದು, ಇದು ಸಾವಿನ ಹೆದ್ದಾರಿಯಾಗಿದೆ ಎಂಬ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಇದು ರೇಸಿಂಗ್ ಟ್ರ್ಯಾಕ್ ಅಲ್ಲ, ಬೆಂಗಳೂರು- ಮೈಸೂರು ನಡುವೆ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಹೈವೇ. ಇದು ರೇಸಿಂಗ್ ಮಾಡೋಕೆ ಇರುವ ರಸ್ತೆಗಳಲ್ಲ, ಅದಕ್ಕಾಗಿ ಬೇರೆ ರಸ್ತೆಗಳಿವೆ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಹೈವೇಯಲ್ಲಿ ಪ್ರತಿದಿನ ಅಪಘಾತಗಳಾಗುತ್ತಿವೆ. ಇದಕ್ಕೆ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಕಾರಣ ಎಂದು ಹೇಳಿದರೆ ಅಥವಾ ತೋರಿಸಿದರೆ ಎಂಜಿನಿಯರ್ಗಳನ್ನು ಕರೆದುಕೊಂಡು ಬಂದು ಸರಿಮಾಡುತ್ತೇನೆ. ಅದನ್ನು ಬಿಟ್ಟು ಬರೀ ಹೆದ್ದಾರಿ ಅವೈಜ್ಞಾನಿಕ ಎಂದು ಹೇಳಿದ್ರೆ ಒಪ್ಪಲು ನಾವು ಸಿದ್ದವಿಲ್ಲ. ಹೆದ್ದಾರಿಯಲ್ಲಿ ಅಪಘಾತವಾಗಲು ಚಾಲಕರ ಬೇಜವಾಬ್ದಾರಿಯುತ ಚಾಲನೆಯೇ ಕಾರಣ ಎಂದರು.
ಹೆದ್ದಾರಿಯಲ್ಲಿ ಯಾವುದೇ ಅವೈಜ್ಞಾನಿಕ ಕಾಮಗಾರಿಗಳು ನಡೆದಿಲ್ಲ. ಹೆದ್ದಾರಿಯಲ್ಲಿ ಗರಿಷ್ಠ ವೇಗ 120 ಕಿಲೋಮೀಟರ್ ಆಗಿದೆ. ಸಣ್ಣಪುಟ್ಟ ಕಾರುಗಳಲ್ಲಿ ವೇಗವಾಗಿ ಹೋದರೆ ಅಪಘಾತಗಳು ಸಂಭವಿಸುತ್ತವೆ. ಯಾರಾದರೂ ಇಂಜಿನಿಯರ್ಗಳು ಈ ರಸ್ತೆ ಪ್ರಾಬ್ಲಮ್ ಇದೆ ಎಂದು ಹೇಳಲಿ. ಖಂಡಿತಾ ಅದನ್ನು ಸರಿಮಾಡುತ್ತೇವೆ. ಕೆಲವು ಅವಶ್ಯಕ ಸೌಲಭ್ಯ ಹಾಗೂ ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಿವೆ ಎಂದರು. ಶೀಘ್ರವೇ ಆ ಕೆಲಸ ಕೈಗೆತ್ತಿಕೊಳ್ಳುತ್ತೇವೆ. ಮಂಡ್ಯದಿಂದ ಮೈಸೂರಿನವರೆಗಿನ ಟೋಲ್ ಸಂಗ್ರಹ ಕಾರ್ಯ ಶೀಘ್ರ ಆರಂಭವಾಗಲಿದೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಎಕ್ಸ್‌ಪ್ರೆಸ್ ಹೈವೇಯನ್ನು ವೈಜ್ಞಾನಿಕವಾಗಿಯೇ ನಿರ್ಮಾಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಆನೇಕಲ್: ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಬಿದ್ದ ಕಂಟೈನರ್; ಚಾಲಕ, ಕ್ಲೀನರ್ ಸಾವು