ರಾಮನಗರ: ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ.
ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲವಾದರೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ಶತ ಪ್ರಯತ್ನ ನಡೆಸುತ್ತಾರೆ. ಈ ಬಾರಿ ಮೈತ್ರಿ ಒಂದು ತಲೆನೋವಾದರೆ, ಬಹುತೇಕ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ಸ್ವಪಕ್ಷೀಯರೇ ಎದುರಾಳಿಗಳಾಗಿರೋದು ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ರಾಮನಗರದಲ್ಲಿ ಹಾಲಿ ಬಮೂಲ್ ಅಧ್ಯಕ್ಷ ಪಿ. ನಾಗರಾಜ್ ಮತ್ತೊಮ್ಮೆ ಆಯ್ಕೆ ಬಯಸಿದ್ದರೆ, ಎದುರಾಳಿಯಾಗಿ ಸ್ವಪಕ್ಷದ ಶಿವಲಿಂಗಪ್ಪ ಸಪ್ಪಗೆರೆ ನಾಮಪತ್ರ ಸಲ್ಲಿಸಿದ್ದು ಎದುರಾಳಿಯಾಗಿರೋದು ಹೈಕಮಾಂಡ್ಗೂ ತಲೆನೋವಾಗಿದೆ. ಇನ್ನು ಚನ್ನಪಟ್ಟಣದಲ್ಲಿ ಹಾಲಿ ನಿರ್ದೇಶಕ ಲಿಂಗೇಶ್ ಕುಮಾರ್ ಮರು ಆಯ್ಕೆ ಬಯಸಿದ್ದರೆ, ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಸ್ಪರ್ಧೆ ಮಾಡಿರೋದು ತುಂಬಾ ತಲೆನೋವಾಗಿ ಪರಿಣಮಿಸಿದೆ.
ಇನ್ನು ಮಾಗಡಿ ಕ್ಷೇತ್ರ ಕೂಡ ಹೊರತಾಗಿಲ್ಲ. ಇಲ್ಲಿ ಹಾಲಿ ನಿರ್ದೇಶಕ ನರಸಿಂಹ ಮೂರ್ತಿ ಮರು ಆಯ್ಕೆ ಬಯಸಿದ್ದರೆ, ಪ್ರತಿಸ್ಪರ್ಧಿಯಾಗಿ ನರಸಿಂಹ ಮೂರ್ತಿ ಸಹೋದರ ಜೆಡಿಎಸ್ನ ಕೆ.ಕೃಷ್ಣಮೂರ್ತಿ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಎನ್. ಮಂಜುನಾಥ್ ಕೂಡ ಆಯ್ಕೆ ಬಯಸಿದ್ದಾರೆ. ಡಿಕೆ ಬ್ರದರ್ಸ ಅಡ್ಡ ಕನಕಪುರದಲ್ಲಿ ಮಾತ್ರ ಹೆಚ್.ಪಿ.ರಾಜಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಮೂರು ಕಡೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಾಗಿದ್ದು, ಮೂರು ಕಡೆಗಳಲ್ಲಿ ಸ್ವಪಕ್ಷೀಯರೇ ಬಂಡಾಯವೆದ್ದಿದ್ದಾರೆ. ಬಂಡಾಯ ಶಮನಕ್ಕೆ ಪ್ರಯತ್ನ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಬಲ್ಲ ಮೂಲಗಳ ಪ್ರಕಾರ ಗೆದ್ದವರಿಗೆ ಹಾರ ಹಾಕುವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ. ಬಂಡಾಯ ಶಮನದ ಯಾವುದೇ ಪ್ರಯತ್ನಕ್ಕೆ ಇನ್ನೂ ಕೈ ಹಾಕಿಲ್ಲ ಎನ್ನಲಾಗುತ್ತಿದೆ.