ರಾಮನಗರ: ಬಿಡದಿ ಇಡ್ಲಿ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಚಿತ್ರನಟರು ಹಾಗೂ ಪ್ರಮುಖ ರಾಜಕಾರಣಿಗಳ ಅಚ್ಚು ಮೆಚ್ಚಿನ ಇಡ್ಲಿ. ಬೆಳಗಿನ ಉಪಹಾರಕ್ಕೆ ಬಿಡದಿ ಇಡ್ಲಿ ತಿನ್ನಲು ಬರುತ್ತಿದ್ದರು. ಆದರೆ, ನೂತನ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಇಡ್ಲಿ ಉದ್ಯಮಕ್ಕೆ ಭಾರಿ ಕೊಡಲಿ ಪೆಟ್ಟು ಬೀಳಲಿದೆ.
ಬಿಡದಿ ಇಡ್ಲಿಗೆ ಹೆದ್ದಾರಿಯ ಕೊಡಲಿ ಪೆಟ್ಟು: ನೂತನ ದಶಪಥ ಹೆದ್ದಾರಿ ನಿರ್ಮಾಣವಾದ ಬಳಿಕ ರಾಮನಗರ ಜಿಲ್ಲೆಯ ಬಿಡದಿ ಪಟ್ಟಣದ ತಟ್ಟೆಇಡ್ಲಿ ಹೋಟೆಲ್ಗಳಿಗೆ ಭಾರೀ ನಷ್ಟವಾಗಲಿದೆ. ಬೆಂಗಳೂರು - ಮೈಸೂರು ಪ್ರಯಾಣಿಕರು ಈಗ ಹಳೇ ಹೆದ್ದಾರಿ ಬಿಟ್ಟು ನೂತನ ಹೆದ್ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈಗಾಗಲೇ ನಷ್ಟವಾಗುತ್ತಿದ್ದ ಉದ್ಯಮಿಗಳಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಹಿಂದೆ ಹೆದ್ದಾರಿಯಲ್ಲಿ ಬರುವವರು ಬಿಡದಿಯಲ್ಲಿ ನಿಲ್ಲಿಸಿ ಇಡ್ಲಿ ಸವಿದು ಹೋಗುತ್ತಿದ್ದರು. ದಿ. ನಟ ಡಾ.ರಾಜ್ ಕುಮಾರ್ ಸೇರಿ ರಾಜಕಾರಣಿಗಳ ಫೆವರೀಟ್ ಸ್ಪಾಟ್ ಬಿಡದಿ ಇಡ್ಲಿ ಇತ್ತು. ರಾಜಕಾರಣಿಗಳು ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಹೋಗುವವರು ಬಿಡದಿಯಲ್ಲಿ ನಿಲ್ಲಿಸಿ ಬಿಡದಿ ಇಡ್ಲಿ ತಿಂದು ಹೋಗುತ್ತಿದ್ದರು.
ಆದರೆ, ಈಗ ಹೆದ್ದಾರಿಯಲ್ಲಿ ಹೋಗುವವರಿಗೆ ಪರ್ಯಾಯ ರಾಷ್ಟ್ರೀಯ ಮಾರ್ಗ ಕಲ್ಪಿಸಲಾಗಿದ್ದು, ಬಿಡದಿ ಮಾರ್ಗವೇ ಸಿಗುತ್ತಿಲ್ಲ. ಒಂದೂವರೆ ತಾಸಿನಲ್ಲಿ ಬೆಂಗಳೂರು ಮೈಸೂರಿಗೆ ಹೋಗುವ ಹೆದ್ದಾರಿಯಾಗುತ್ತಿರುವುದರಿಂದ ಯಾರೂ ಕೂಡ ಬಿಡದಿಯತ್ತ ಸುಳಿಯುವುದೇ ಇಲ್ಲ. ಇದರಿಂದ ಬಿಡದಿ ಇಡ್ಲಿ ಹೆಸರು ಇತಿಹಾಸ ಸೇರುವ ದಿನಗಳು ಸನ್ನಿಹಿತವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಈ ಕುರಿತು ಹೋಟೆಲ್ ಮಾಲೀಕರು ಹಾಗೂ ಪ್ರಯಾಣಿಕರು ಹೇಳುವ ಪ್ರಕಾರ ನೂತನ ಹೆದ್ದಾರಿಯಲ್ಲಿ ಬಿಡದಿ ತಟ್ಟೆಇಡ್ಲಿ ಬಗ್ಗೆ ಜಾಹೀರಾತು ಹಾಕಲಿ. ಬಿಡದಿ ಇಡ್ಲಿ ತಿನ್ನುವವರು ಇಲ್ಲಿಗೆ ಬರುತ್ತಾರೆ. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಅನುಕೂಲ ಆಗಲಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಅದೇನೇ ಇರಲಿ ನೂತನ ಹೆದ್ದಾರಿಯಿಂದ ಒಂದು ಕಡೆ ಅನುಕೂಲವಾದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎಲ್ಲ ಉದ್ಯಮಗಳು ನೆಲ ಕಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಇದನ್ನೂ ಓದಿ: ಬೊಂಬೆ ಉದ್ಯಮದ ಮೇಲೆ ದಶಪಥ ಹೆದ್ದಾರಿ ಕರಿ ನೆರಳು