ರಾಮನಗರ: ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಲೇ ಇದೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮಗುವಿಗೆ ಚಿಕಿತ್ಸೆ ಸಿಗದೆ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚನ್ನಪಟ್ಟಣದ ಪೇಟೆಕೇರಿ ನಿವಾಸಿ ಪ್ರದೀಪ್ ಎಂಬುವರ 7 ತಿಂಗಳ ಹೆಣ್ಣು ಮಗುವಿಗೆ ಬೆಳಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮಕ್ಕಳ ವೈದ್ಯರು ಇಲ್ಲವೆಂಬ ಕಾರಣಕ್ಕೆ ಬೇರೆ ಕಡೆ ಕರೆದುಕೊಂಡು ಹೋಗುವಂತೆ ಅಲ್ಲಿನ ಸಿಬ್ಬಂದಿ ಹೇಳಿದ್ದರು. ಆಗ ಪೋಷಕರು ನಗರದ ಖ್ಯಾತ ಮಕ್ಕಳ ತಜ್ಞ ರಾಜಣ್ಣ ಅವರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯ ರಾಜಣ್ಣ, ಮಗುವಿನ ಸ್ಥಿತಿ ಗಂಭೀರವಾಗಿದೆ. ಬೇರೆಡೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ.
ನಂತರ ಅಲ್ಲಿಂದ ನಗರದ ಬಿ.ಜಿ.ಲಿಂಗೇಗೌಡ ಆಸ್ಪತ್ರೆಗೆ ಕರೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಲೆದರೂ ಸೂಕ್ತ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದೆ ಎಂದು ವೈದ್ಯಕೀಯ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.