ಕನಕಪುರ: ದೇಶಾದ್ಯಂತ ಕೊರೊನಾ ಹಾವಳಿಯಿಂದ ಲಾಕ್‌ಡೌನ್ ಆಗಿದ್ದು, ಎಲ್ಲಾ ವ್ಯಾಪಾರ ವಹಿವಾಟು ಸ್ತಬ್ಧವಾಗಿದೆ. ಹಾಲಿನ ವ್ಯಾಪಾರದಲ್ಲೂ ಕುಸಿತ ಕಂಡು ಬಂದಿದೆ. ಇದೀಗ ನಂದಿನಿ ಹಾಲನ್ನು ಆಂಧ್ರ ಪ್ರದೇಶ ಸರ್ಕಾರ ನಿತ್ಯವೂ 1 ಲಕ್ಷ ಲೀ ಖರೀದಿಸುತ್ತಿದೆ. ಈ ಹಾಲನ್ನು ವಿಜಯವಜ್ರ ಎಂಬ ಹೆಸರಿನಲ್ಲಿ ರವಾನೆ ಮಾಡಲಾಗುತ್ತಿದೆ.
ಲಾಕ್‌ಡೌನ್ ನಡುವೆ ರೈತರಿಗೆ ಯಾವುದೇ ತೊಂದರೆಯಾಗಬಾರದು ಎಂದು ಕರ್ನಾಟಕದ ಹಾಲು ಒಕ್ಕೂಟ ಮುಂಜಾಗ್ರತೆ ವಹಿಸಿದೆ. ಇನ್ನು ಲಾಕ್‌ಡೌನ್ ಆದ ನಂತರ ಆಂಧ್ರ ಸರ್ಕಾರ 1 ಲಕ್ಷ ಲೀ ಹಾಲು ಖರೀದಿಸುತ್ತಿದೆ. ಇದಕ್ಕಾಗಿ ಆಂಧ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟದಿಂದ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ನಿತ್ಯ 50 ಸಾವಿರ ಲೀ ಹಾಲು ಖರೀದಿಸುವಂತೆ ಮನವಿ ಮಾಡಿದರು. ಇನ್ನು ಹಾಲಿನ ಉತ್ಪನ್ನಗಳ ಘಟಕದಿಂದ ಹಾಲು ಮಾರಾಟ ಕುಸಿತವಾದರೂ ನಾವು ಇತರೆ ಹಾಲಿನ ಉತ್ಪನ್ನಗಳನ್ನು ಮಾಡುತ್ತಿದ್ದು, ಉಳಿದ ಹಾಲನ್ನು ಪೌಡರ್ ಮಾಡುತ್ತಿದ್ದೇವೆ. ಈ ಘಟಕದ ಕಾರಣಕರ್ತರಾದ ಡಿ.ಕೆ. ಸಹೋದದರರಿಗೆ ರೈತರ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಇನ್ನು ನಂದಿನಿ ಹಾಲನ್ನು ಮುಂದಿನ 2 ವರ್ಷಗಳವರೆಗೆ ನಿತ್ಯವೂ ಖರೀದಿ ಮಾಡಲು ಕರಾರು ಆಗಿದ್ದು, ಇದನ್ನು ವಿಜಯವಜ್ರ ಎಂಬ ಹೆಸರಿನಲ್ಲಿ ಪ್ಲೆಕ್ಸಿಪ್ಯಾಕ್ ಮಾಡಿ 90 ದಿನಗಳ ವರೆಗೆ ಕೆಡದಂತೆ ಬಳಸುವ ಗುಣಮಟ್ಟದ ಹಾಲನ್ನು ಆಂಧ್ರ ಸರ್ಕಾರಕ್ಕೆ ನೀಡಲಾಗುತ್ತಿದೆ ಎಂದರು.