ಫೈಟರ್ ಸಾವು ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ನಟ ಅಜಯ್ ರಾವ್ - ಲವ್ ಯೂ ರಚ್ಚು,
ರಚಿತಾ ರಾಮ್ ಮತ್ತು ಅಜಯ್ ರಾವ್ ನಟನೆಯ ‘ಲವ್ ಯೂ ರಚ್ಚು’ ಸಿನಿಮಾದ ಶೂಟಿಂಗ್ ವೇಳೆ ಫೈಟರ್ ವಿವೇಕ್ ನಿಧನರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು ನಟ ಅಜಯ್ ರಾವ್ ಬಿಡದಿಯ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು.
ರಾಮನಗರ: ಲವ್ ಯೂ ರಚ್ಚು ಸಿನಿಮಾ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಡದಿ ಪೊಲೀಸ್ ಠಾಣೆಗೆ ಚಿತ್ರನಟ ಅಜಯ ರಾವ್ ಹಾಜರಾಗಿ ವಿಚಾರಣೆ ಎದುರಿಸಿದರು.
ಬಿಡದಿಯ ಜೋಗರಪಾಳ್ಯ ಗ್ರಾಮದಲ್ಲಿ ನಡೆಯುತ್ತಿದ್ದ 'ಲವ್ ಯೂ ರಚ್ಚು' ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಹಾಗೂ ಸಾಹಸ ನಿರ್ದೇಶಕರನ್ನು ಬಂಧಿಸಲಾಗಿದೆ. ಇಂದು ಪ್ರಕರಣಕ್ಕೆ ಸಂಬಂಧಿಸಿ ಮತ್ತು ಅಜಯ್ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಡಿವೈಎಸ್ಪಿ ಮೋಹನ್ ಕುಮಾರ್ ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ವಿಚಾರಣೆ ಬಳಿಕ ಮಾತನಾಡಿದ ನಟ ಅಜಯ್ ರಾವ್, ಆಸ್ಪತ್ರೆಯಲ್ಲಿರುವವನಿಗೆ ಸುಳ್ಳು ಮಾಹಿತಿ ನೀಡಿ ಹೇಳಿಕೆ ಕೊಡಿಸಲಾಗಿದೆ. ಸೆಟ್ನಲ್ಲಿ ನಾನೊಬ್ಬನೇ ಇದ್ದೆನಾ? ಅಲ್ಲಿ ಎಲ್ಲರೂ ಇದ್ದರು. ಸಹಾಯ ಮಾಡಬೇಕು ಅಂದ್ರೆ ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು ಹೇಳಿ ಎಂದರು.
ನಾನು ಹೆದರಿಕೊಂಡು ಬೇಲ್ಗೆ ಅರ್ಜಿ ಹಾಕಿಲ್ಲ: ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ನಾನು ಹೆದರಿಕೊಂಡು ಜಾಮೀನು ಅರ್ಜಿಯನ್ನು ಸಲ್ಲಿಸಿಲ್ಲ. ನನ್ನ ನಂಬಿ ಹಲವಾರು ನಿರ್ಮಾಪಕರು ನನ್ನ ಮೇಲೆ ಹಣ ಹೂಡಿರುತ್ತಾರೆ. ನಾನು ಹೆದರಿಕೊಂಡು ಎಲ್ಲೂ ಓಡಿ ಹೋಗಿಲ್ಲ ಎಂದು ಅಜಯ್ ರಾವ್ ಹೇಳಿದರು.
ಸಾಕ್ಷ್ಯ ನಾಶ ಪಡಿಸುವ ಕೆಲಸನ್ನು ಚಿತ್ರತಂಡ ಮಾಡಿಲ್ಲ: ಈ ರೀತಿ ತಪ್ಪು ಮಾಹಿತಿ ಹಬ್ಬಿಸುತ್ತಿರುವವರು ಸಿಕ್ಕರೆ ಒಂದು ನಾಲ್ಕು ಒಳ್ಳೆಯ ಮಾತು ಹೇಳಬಹುದು. ಆದರೆ ಅಂತಹವರು ಯಾರು ಎಂದು ಗೊತ್ತಿಲ್ಲ. ಚಿತ್ರೀಕರಣದ ವೇಳೆ ಹೀರೋಯಿನ್ ಇರಲಿಲ್ಲ, ಪ್ಯಾಚ್ ವರ್ಕ್ ನಡೆಯುತ್ತಿತ್ತು ಅಷ್ಟೇ. ಆದರೆ ಸಾಕ್ಷ್ಯ ನಾಶ ಪಡಿಸುವ ಕೆಲಸವನ್ನ ಚಿತ್ರತಂಡ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಿರ್ಮಾಪಕರು ನನ್ನ ಸಂಪರ್ಕಕ್ಕೆ ಸಿಗ್ತಿಲ್ಲ: ನಿರ್ಮಾಪಕರು ಆತನ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತಾರೆ. ನಂತರ ನಾನು ಸಹ ನೆರವಾಗುವೆ. ಆದರೆ ಇದಕ್ಕೂ ಹೀರೋನೆ ಮೊದಲು ಬರಬೇಕು ಅಂದ್ರೆ ಅದಕ್ಕೂ ನಾನು ರೆಡಿ ಇದ್ದೇನೆ. ನಿರ್ಮಾಪಕರ ಚೆಕ್ ಆತನ ಕುಟುಂಬಕ್ಕೆ ಸಿಕ್ಕಿಲ್ಲ ಅನ್ನೋ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಆ ವಿಚಾರ ನನಗೆ ಗೊತ್ತಿಲ್ಲ. ನಿರ್ಮಾಪಕರು ನನ್ನ ಸಂಪರ್ಕಕ್ಕೆ ಸಿಗ್ತಿಲ್ಲ. ಮುಂದೆ ಮತ್ತೆ ನನ್ನನ್ನ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ನಟ ಅಜಯ್ ರಾವ್ ಹೇಳಿದರು.