ರಾಮನಗರ : ಮನೆಗೆ ಆಧಾರಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡು ಪೋಷಕರು ಕಂಗಾಲಾಗಿದ್ದಾರೆ. ಮೃತ ಯೋಧನ ಶವವನ್ನು ಮಾಗಡಿಗೆ ತರುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಜಮ್ಮುವಿನ ಉಧಂಪುರ ಕ್ಯಾಂಪ್ ಬಳಿ ನಿಗೂಢವಾಗಿ ಮೃತಪಟ್ಟ ಮಾಗಡಿ ಯೋಧ 29 ವರ್ಷದ ವೆಂಕಟ್ನರಸಿಂಹಮೂರ್ತಿ ಪಾರ್ಥೀವ ಶರೀರ ಸ್ವಗ್ರಾಮ ತಲುಪಿತು.
ಮೂಲತಃ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಚಿಕ್ಕನರಸಿಂಹಯ್ಯ ಅವರ ಪುತ್ರ ವೆಂಕಟ್ ಕಳೆದ 8 ವರ್ಷಗಳ ಹಿಂದೆ ಸಿ.ಎಲ್.ಎಸ್.ಎಫ್ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಮೂರು ದಿನವಾದರೂ ಮಗನ ಶವಕ್ಕಾಗಿ ಮೃತರ ಸಂಬಂಧಿಕರು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರು. ನಿನ್ನೆ ರಾತ್ರಿ ಮಾಗಡಿ ಪಟ್ಟಣಕ್ಕೆ ಶವ ಬರುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಯೋಧನ ಮೃತದೇಹವನ್ನು ಮಾಗಡಿಯ ಹೊಂಬಾಳಮ್ಮನ ಪೇಟೆಯ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಯೋಧನ ಅಂತಿಮ ದರ್ಶನ ಪಡೆದುಕೊಂಡರು.
ಮಾಗಡಿ ಪಟ್ಟಣಕ್ಕೆ ಬಂದಾಗ ಎಲ್ಲರೊಂದಿಗೂ ಚೆನ್ನಾಗಿ ಆಟ ಆಡುತ್ತಿದ್ದ ವೆಂಕಟ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತನ ಸಾವಿಗೆ ಸರಿಯಾದ ಕಾರಣವೇ ತಿಳಿಯುತ್ತಿಲ್ಲ ಎಂದಿರುವ ಸ್ನೇಹಿತ ಅಂಜನ್ ಕುಮಾರ್, ಸಾವಿಗೆ ನಿಜವಾದ ಕಾರಣ ಆದಷ್ಟೂ ಬೇಗ ತಿಳಿದುಬರಲಿ ಎಂದು ಒತ್ತಾಯಿಸಿದರು.