ರಾಮನಗರ: ಸಾಲಬಾಧೆಯಿಂದ ಬೇಸತ್ತು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ರಾಮನಗರ ತಾಲೂಕಿನ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. 7 ಜನರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಇನ್ನುಳಿದ 6 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ಕುಟುಂಬದ 7 ಜನ ಆತ್ಮಹತ್ಯೆ ಯತ್ನ: ರಾಜು(31), ಪತ್ನಿ ಮಂಗಳಮ್ಮ(28), ರಾಜು ಅತ್ತೆ ಸೊಲ್ಲಾಪುರದಮ್ಮ (48), ರಾಜು ಮಕ್ಕಳು ಆಕಾಶ್ (9), ಕೃಷ್ಣ (13) ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ(4) ಊಟದಲ್ಲಿ ವಿಷ ಸೇವಿಸಿದ್ದರು. 7 ಜನರ ಪೈಕಿ ಮಂಗಳಮ್ಮ ಮೃತಪಟ್ಟಿದ್ದಾರೆ. ಸಾಲಗಾರರ ಕಾಟ ತಾಳಲಾರದೇ ಹುಟ್ಟೂರು ಬೆಂಗಳೂರಿನ ಸುಬ್ರಪ್ಪನಪಾಳ್ಯ ಬಿಟ್ಟು ರಾಮನಗರದ ದೊಡ್ಡಮಣ್ಣುಗುಂಡಿ ಗ್ರಾಮಕ್ಕೆ ರಾಜು ಕುಟುಂಬ ಸಮೇತ ಬಂದಿದ್ದರು. ಇಲ್ಲಿರುವ ಸೋದರ ಅತ್ತೆ ಸೊಲ್ಲಾಪುರದಮ್ಮ ಮನೆಯಲ್ಲೇ ರಾಜು, ಪತ್ನಿ, ಮಕ್ಕಳು ವಾಸವಾಗಿದ್ದರು. ರಾಜು ಸುಮಾರು 11 ಲಕ್ಷ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗಿದೆ. ಬಡ್ಡಿಗೆ ಬಡ್ಡಿ ಹಾಕಿ ಲಕ್ಷಾಂತರ ರೂ ಸಾಲ ಕಟ್ಟುವಂತೆ ಸಾಲಗಾರರು ದಿನನಿತ್ಯ ಮನೆಗೆ ಬಂದು ಒತ್ತಡ ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿ: ರೈಸ್ ಪುಲ್ಲಿಂಗ್ ಯಂತ್ರದ ಹೆಸರಲ್ಲಿ ಆರು ಕೋಟಿ ರೂ.ವಂಚನೆ: ನಾಲ್ವರ ವಿರುದ್ಧ ಎಫ್‌ಐಆರ್
ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ: ಸಾಲಗಾರರ ಕಾಟಕ್ಕೆ ಬೇಸತ್ತು ಕುಟುಂಬಸ್ಥರು ಸಾಯುವ ನಿರ್ಧಾರ ಮಾಡಿದ್ದರು. ಅಂತೆಯೇ 7 ಮಂದಿ ಸಾಮೂಹಿಕವಾಗಿ ಊಟ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಊಟದ ಬಳಿಕ ಕುಟುಂಬಸ್ಥರು ಸಕ್ಕರೆ ಅಚ್ಚು, ಬಾಳೆ ಹಣ್ಣು ಸೇವಿಸಿದ್ದರು. ತಾನು ಮಾತ್ರ ಸತ್ತರೆ ಕುಟುಂಬಸ್ಥರಿಗೆ ಸಾಲಗಾರರ ಕಾಟ ತಪ್ಪುವುದಿಲ್ಲ ಎಂದು ಎಲ್ಲರಿಗೂ ವಿಷ ಉಣಿಸುವ ರಾಜು ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಊರ ಹೊರಗಿದ್ದ ಮಾವನ ಸಮಾಧಿ ಬಳಿ ರಾಜು ಕುಟುಂಬ ಆತ್ಮಹತ್ಯೆ ಯತ್ನ ಮಾಡಿದೆ.
ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದ ಕುಟುಂಬ: ಎಲ್ಲರೂ ಸಾಯುವ ನಿರ್ಧಾರಕ್ಕೆ ಬಂದಿದ್ದರಿಂದ ಮನೆಯಿಂದಲೇ ಊಟ ತೆಗೆದುಕೊಂಡು ಊರ ಹೊರಗಿದ್ದ ಸೊಲ್ಲಾಪುರದಮ್ಮನ ಗಂಡನ ಸಮಾಧಿ ಬಳಿ ನಿನ್ನೆ ಮಧ್ಯಾಹ್ನ ಆಗಮಿಸಿದ್ದರು. ಕೆಲಹೊತ್ತು ಅಲ್ಲೇ ಕುಳಿತು ಬಳಿಕ ಊಟದಲ್ಲಿ ವಿಷ ಸೇರಿಸಿ ಸೇವಿಸಿದ್ದರು. ನಂತರ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಬಳಿಕ ಉಳಿದವರು ನೋವು ತಾಳದೇ ಸಮಾಧಿಯಿಂದ ಹೊರಟು ಊರ ಕಡೆಗೆ ಬಂದು, ಗ್ರಾಮದ ಜನರಿಗೆ ವಿಷ ಸೇವಿಸಿರುವುದಾಗಿ ಹೇಳಿದ್ದರು. ತಕ್ಷಣವೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ವರ್ಷದ ಹಿಂದೆ ಸೊಲ್ಲಾಪುರದಮ್ಮ ಗಂಡ ಕೂಡ ಸಾವನ್ನಪ್ಪಿದ್ದು, ಅವರ ಸಮಾಧಿ ಬಳಿಯೇ ಆತ್ಮಹತ್ಯೆಗೆ ಎಲ್ಲರೂ ಯತ್ನಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡವರನ್ನ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಎಸ್ಪಿ ಪ್ರತಿಕ್ರಿಯೆ: ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿ, ''ಎಂಕೆ ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸೋಲಮಾರನಗುಡ್ಡೆ ಬೆಟ್ಟದಲ್ಲಿ ಗುರುವಾರ ಮಧ್ಯಾಹ್ನ 2-3 ಗಂಟೆ ಸುಮಾರಿಗೆ ದೊಡ್ಡಮಣ್ಣುಗುಡ್ಡೆ ಗ್ರಾಮದ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ರಾಜು ತಮ್ಮ ಸ್ನೇಹಿತರಿಗೆ ಈ ಬಗ್ಗೆ ಕರೆ ಮಾಡಿ ತಿಳಿಸಿದ್ದು, ಬಳಿಕ ಸ್ನೇಹಿತರು ಸ್ಥಳಕ್ಕೆ ತೆರಳಿ ಎಲ್ಲರನ್ನೂ ರಾಮನಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇವರಲ್ಲಿ ರಾಜು ಪತ್ನಿ ಮಂಜುಳಮ್ಮ (28) ಮೃತರಾಗಿದ್ದಾರೆ. ಉಳಿದವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಸಂಬಂಧ ಎಂಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ'' ಎಂದು ಹೇಳಿದ್ದಾರೆ.
''ಕುಟುಂಬದ ರಾಜು ಅವರು ಕೆಲವರಿಂದ 8ರಿಂದ 10 ಲಕ್ಷ ರೂ. ಸಾಲ ಪಡೆದು, ತಮ್ಮ ಸಹೋದರನಿಗೆ ನೀಡಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಹಣ ಮರಳಿ ನೀಡಿರಲಿಲ್ಲ. ಹೀಗಾಗಿ ಸಾಲ ಪಡೆದವರಿಗೆ ಹಣ ನೀಡಿ ತೀರಿಸಲು ಆಗಿರಲಿಲ್ಲ. ಇದರಿಂದ ಮನನೊಂದು ರಾಜು ಹಾಗೂ ಕುಟುಂಬಸ್ಥರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಮಾರಕಾಸ್ತ್ರದಿಂದ ಮೂವರು ಮಕ್ಕಳ ಕೊಲೆಗೈದು ವ್ಯಕ್ತಿ ಆತ್ಮಹತ್ಯೆ; ಪತ್ನಿಗೆ ಚಿಕಿತ್ಸೆ
ಇದನ್ನು ಓದಿ: ಜಮೀನು ಆಸ್ತಿ ಹಂಚಿಕೆ ವಿಚಾರ.. ಮದುವೆಯಾಗಲಿ ತಡೀ ಎಂದ ಅಣ್ಣನನ್ನೇ ಕೊಂದು ಹಾಕಿದ ತಮ್ಮ