ರಾಮನಗರ: ಕೈಲಾಂಚ ಹೊಬಳಿಯ ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಭಾಪುರ ಗ್ರಾಮದ 28 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೈಲಾಂಚ ಹೊಬಳಿಯಲ್ಲಿ ಎರಡನೇ ಪ್ರಕರಣ ಇದಾಗಿದೆ.
ಮೊದಲ ಪ್ರಕರಣ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೋಜನಹಳ್ಳಿ ಗ್ರಾಮದ ವೃದ್ಧೆಗೆ ಕಳೆದ 15 ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂತಿರುಗಿದ್ದರು. ಎರಡನೇ ಪ್ರಕರಣವಾಗಿ ವಿಭೂತಿಕೆರೆ ಗ್ರಾಮ ಪಂಚಾಯಿತಿಯ ಕುಂಭಾಪುರ ಗ್ರಾಮದ ಯುವಕನಲ್ಲಿ ಕಾಣಿಸಿಕೊಂಡಿದ್ದು, ಇದೀಗ ಜನರ ನಿದ್ದೆಗೆಡಿಸಿದೆ.
ಕೊರೊನಾ ಸೋಂಕಿತ ಯುವಕ ಕುಂಭಾಪುರ ವಾಸಿಯಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಜೂನ್ 20ರ ಶನಿವಾರ ಬೆಂಗಳೂರಿನಿಂದ ಕುಂಭಾಪುರ ಗ್ರಾಮಕ್ಕೆ ಬಂದಿದ್ದಾನೆ. ಮನೆಯಲ್ಲಿದ್ದಾಗ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯಲು ರಾಮನಗರದ ಖಾಸಗಿ ಆಸ್ಪತ್ರೆ ಮೊರೆಹೋಗಿದ್ದಾರೆ. ಯುವಕನನ್ನು ಪರಿಶೀಲಿಸಿದ ವೈದ್ಯರು ಜ್ವರಕ್ಕೆ ಚಿಕಿತ್ಸೆ ನೀಡಿ ಯಾವುದಕ್ಕೂ ಕೋವಿಡ್-19 ಪರೀಕ್ಷೆ ಮಾಡಿಸಲು ಹೇಳಿದ್ದಾರೆ. ಬಳಿಕ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾನೆ.
ಪರೀಕ್ಷೆ ಮಾಡಿಸಿದ ನಂತರ ಕುಂಭಾಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆವರೆಗೆ ಇದ್ದು ಬೆಂಗಳೂರಿಗೆ ಕೆಲಸಕ್ಕೆ ತೆರಳಿದ್ದಾನೆ. ಗುರುವಾರ ಯುವಕನಿಗೆ ಕೊರೊನಾ ಸೋಂಕಿರುವುದು ದೃಡಪಟ್ಟಿದೆ. ಸೋಂಕು ದೃಢಪಟ್ಟ ನಂತರ ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನನ್ನು ಕರೆಸಿಕೊಂಡು ರಾಮನಗರ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮನೆಯಲ್ಲಿದ್ದ ಎರಡು ದಿನವೂ ಮನೆಯವರನ್ನು ಬಿಟ್ಟರೆ ಗ್ರಾಮದಲ್ಲಿ ಬೇರೆ ಯಾರನ್ನೂ ಸಂಪರ್ಕ ಮಾಡಿಲ್ಲ ಎಂದು ತಿಳಿದುಬಂದಿದೆ. ಆರೋಗ್ಯ ಇಲಾಖೆ ಸೋಂಕಿತರ ಪ್ರಥಮ ಸಂಪರ್ಕಿತರಾದ ತಂದೆ, ತಾಯಿ, ಅಣ್ಣ, ಅತ್ತಿಗೆ, ಅಜ್ಜಿಯವರನ್ನು ರಾಮನಗರದ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಿದ್ದಾರೆ. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸದ್ಯ ಯುವಕ ವಾಸವಿದ್ದ ಮನೆಯಿಂದ 100 ಮೀಟರ್ ಅಂತರದವರೆಗೆ ಸೀಲ್ಡೌನ್ ಮಾಡಿ ಬಫರ್ ಎಂದು ಝೋನ್ ಘೋಷಿಸಿದೆ.