ರಾಮನಗರ: ರಾಮನಗರ ಐಜೂರು ಬಳಿ ಇರುವ ನೇತಾಜಿ ಪಾಪ್ಯುಲರ್ ಶಾಲೆ ಮುಂಭಾಗ ಜೂನ್ 4 ರಂದು ಮ್ಯಾನ್ ಹೋಲ್ ದುರಸ್ತಿಗೆ ಇಳಿದಿದ್ದ ಮೂರು ಕಾರ್ಮಿಕರು ಮೃತಪಟ್ಟಿದ್ದು, ಅವರಿಗೆ ಇಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ವೆಂಕಟೇಶನ್ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 10 ಲಕ್ಷ ರೂ. ಪರಿಹಾರ ಚೆಕ್ಅನ್ನು ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ವಿತರಿಸಿದರು.
ಮೃತಪಟ್ಟ ಮಂಜುನಾಥ್ (32) ಮತ್ತು ಮಂಜುನಾಥ್ (30) ಎಂಬ ಇಬ್ಬರು ವ್ಯಕ್ತಿಯ ಕುಟುಂಬದ ವರ್ಗದವರಿಗೆ ಚೆಕ್ ವಿತರಿಸಿದ್ದು, ರಾಜೇಶ್ ಎಂಬ ವ್ಯಕ್ತಿಯ ಕುಟುಂಬ ವರ್ಗದವರನ್ನು ಸರಿಯಾಗಿ ಗುರುತಿಸಿ ಪರಿಶೀಲಸಿ ನಂತರ ಅವರಿಗೆ ಪರಿಹಾರ ಚೆಕ್ ನೀಡಲಾಗುವುದು ಎಂದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ ವೆಂಕಟೇಶನ್ ಅವರು ಮಾತನಾಡಿ ಘಟನೆ ಗಮನಕ್ಕೆ ಬಂದ ತಕ್ಷಣ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಗುತ್ತಿಗೆದಾರರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪರಿಶೀಲಿಸಿ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಇದನ್ನು ಓದಿ: ರಾಮನಗರ: ಮ್ಯಾನ್ ಹೋಲ್ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ದುರ್ಮರಣ
ಜಿಲ್ಲೆಗಳಲ್ಲಿ ಜಿಲ್ಲಾ ಜಾಗೃತಿ ಸಮಿತಿ ಇದ್ದು, ಪ್ರತಿ 3 ತಿಂಗಳಿಗೊಂದು ಸಭೆ ನಡೆಸಬೇಕು. ಸಫಾಯಿ ಕರ್ಮಚಾರಿಗಳಲ್ಲಿ ಸಹ ಜಾಗೃತಿ ಮಾಡಿಸಬೇಕು. ಅರ್ಧ ದಿನಕ್ಕೆ 250 ರೂ. ಕೂಲಿ ಕೊಡುತ್ತಾರೆ ಎಂಬ ಆಸಗೆ ಮ್ಯಾನ್ ಹೋಲ್ಗೆ ಇಳಿಯಬಾರದು. ಅದಕ್ಕೆ ಆದಂತಹ ಯಂತ್ರಗಳಿವೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಅವರು ಮಾತನಾಡಿ, ಮ್ಯಾನ್ ಹೋಲ್ನಲ್ಲಿ ಕೆಲಸ ಮಾಡಲು ಇಳಿದು 3 ಜನ ಕಾರ್ಮಿಕರು ಸಾವನ್ನಪ್ಪಿರುವುದು ವಿಷಾದನೀಯ ವಿಷಯ. ಮ್ಯಾನ್ ಹೋಲ್ನಲ್ಲಿ ಯಾರನ್ನು ಕೂಡ ಇಳಿಸಬಾರದು ಇಂದು ತುಂಬ ಆಧುನಿಕ ಯಂತ್ರಗಳಿವೆ ಅವನ್ನು ಬೆಳಸಿಕೊಳ್ಳಬೇಕು ಎಂದರು.
ಈ ಘಟನೆಯ ಹಿನ್ನೆಲೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ . ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಸೂಚನೆ ನೀಡಲಾಗುವುದು. ಮೃತಪಟ್ಟ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಘಟನೆಯಲ್ಲಿ ಮೃತಪಟ್ಟವರು ಅಟ್ರಾಸಿಟಿ ವ್ಯಾಪ್ತಿಗೆ ಬಂದಲ್ಲಿ ಅದರಡಿ ನೀಡಲಾಗುವ ಪರಿಹಾರವನ್ನು ಸಹ ಒದಸಿಸಲಾಗುವುದು ಎಂದರು.