ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ನಗರದ ಎಸ್‌ಆರ್‌ಪಿಯು ಕಾಲೇಜಿನಲ್ಲಿ ಮತ ಏಣಿಕೆಗೆ ಜಿಲ್ಲಾಡಳಿತ ಸಿದ್ದತೆ ಕಾರ್ಯ ಮಾಡಿಕೊಂಡಿದೆ. ಕೋವಿಡ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚುನಾವಣಾ ಆಯೋಗ ಕೆಲವು ನೂತನ ನಿರ್ದೇಶನಗಳನ್ನು ನೀಡಿದೆ, ಅದರಂತೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಒಟ್ಟು ಮೂರು ಎಣಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಹಿಂದೆ ಎರಡು ಇತ್ತು. ಒಂದು ಕೌಂಟಿಂಗ್ ಹಾಲ್‌ನಲ್ಲಿ 4 ಟೇಬಲ್‌ಗಳಿರುತ್ತವೆ. ಒಂದು ರೌಂಡ್‌ನಲ್ಲಿ 12 ಟೇಬಲ್‌ಗಳಿರುತ್ತವೆ. ಅಂಚೆ ಮತ ಪತ್ರಗಳು ಸೇರಿದಂತೆ ಒಟ್ಟಾರೆ 25 ರಿಂದ 26 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಎಣಿಕಾ ಸಮಯ ಹೆಚ್ಚಾಗಬಹುದು. 5 ವಿವಿ ಪ್ಯಾಟ್‌ಗಳ ಎಣಿಕೆಯು ನಡೆಯಲಿದೆ, ಸಂಜೆ 4 ರಿಂದ 5 ರ ಒಳಗೆ ಎಣಿಕಾ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ಎಣಿಕಾ ಕಾರ್ಯಕ್ಕೆ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಣಿಕಾ ಮೇಲ್ವಿಚಾರಕರು, ಸಹಾಯಕರು, ಎಣಿಕಾ ಮೈಕ್ರೋ ವೀಕ್ಷಕರು ಸೇರಿದಂತೆ ಒಟ್ಟಾರೆ ಅಧಿಕಾರಿಗಳು ಸೇರಿ 210 ಸಿಬ್ಬಂದಿ , 290 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶದಂತೆ ಎಲ್ಲ ಕೌಂಟಿಂಗ್ ಏಜೆಂಟರುಗಳಿಗೆ ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಅವರನ್ನು ಒಳಗೆ ಬಿಡಲಾಗುವುದು. ಎಣಿಕೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ನೆಗೆಟಿವ್ ವರದಿ ಇರಬೇಕು, ಅದರಂತೆ ಮಾಧ್ಯಮದವರಿಗೆ ನೆಗೆಟಿವ್ ಪ್ರಮಾಣ ಪತ್ರವಿದ್ದಲ್ಲಿ ಮಾತ್ರ ಅವರನ್ನು ಎಣಿಕಾ ಕೇಂದ್ರದೊಳಗೆ ಬಿಡಲಾಗುವುದು.
ಎಣಿಕಾ ಕೇಂದ್ರದೊಳಗೆ ಕುಳಿತುಕೊಳ್ಳಲು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ, ಎರಡು ಕೌಂಟಿಂಗ್ ಏಜೆಂಟ್ ಮಧ್ಯೆ ಇರುವವರು ಪಿಪಿಇ ಕಿಟ್ ಹಾಕಿಕೊಳ್ಳಬೇಕು ಎನ್ನುವ ನಿರ್ದೇಶನ ಬಂದಿದೆ. ಅದನ್ನು ಅಭ್ಯರ್ಥಿಗಳಿಗೆ ಲಿಖಿತವಾಗಿಯೂ ತಿಳಿಸಲಾಗಿದೆ ಎಂದರು.
ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುವಂತಿಲ್ಲ, ಈಗಾಗಲೇ ಸೆಕ್ಷನ್ 144 ಜಾರಿಗೊಂಡಿದ್ದು, ಗುಂಪು ಸೇರುವಂತಿಲ್ಲ, ಕೌಂಟಿಂಗ್ ಏಜೆಂಟ್‌ಗಳಿಗೆ ಪಿಪಿಇ ಕಿಟ್ ಹಾಕಿಕೊಂಡು ಬರುವಂತೆ ತಿಳಿಸಲಾಗಿದೆ. ಅವರಿಗೆ ಫೇಸ್ ಶೀಲ್ಡ್, ಅಲ್ಲದೇ ಎನ್-95 ಮಾಸ್ಕ್, ಹ್ಯಾಂಡ್ ಗ್ಲೌಸ್ ಕೂಡ ನೀಡಲಾಗುವುದು ಎಂದರು. ಯಾವುದೇ ಅಹಿಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.