ರಾಯಚೂರು : ರಾಜ್ಯದಲ್ಲಿ ತಲ್ಲಣ ಮೂಡಿಸಿದಂತಹ ರಾಯಚೂರು ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿ ಸಾವಿನ ಪ್ರಕರಣ ಸಂಭವಿಸಿ ಆರು ತಿಂಗಳು ಕಳೆದಿವೆ. ಆದ್ರೆ ಗ್ರಾಮ ಲೆಕ್ಕಾಧಿಕಾರಿ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಧನ, ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದ್ರೆ ಇದುವರೆಗೆ ಯಾವುದೇ ಪರಿಹಾರ ನೀಡಿಲ್ಲ.
ಇದರ ಪರಿಣಾಮ ಆ ಕುಟುಂಬ ಸಂಕಷ್ಟ ಎದುರಿಸುತ್ತಿದ್ದು, ನಮಗೆ ಪರಿಹಾರ, ಮಕ್ಕಳಿಗೆ ವಿದ್ಯಾಭ್ಯಾಸ ಸಹಾಯ ಮಾಡಿ ಅಂತಾ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
2018 ಡಿ.22ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕಲಪರ್ವಿ ಗ್ರಾಮದ ಬಳಿ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್(45) ಸಾವಿನ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣ ಮೂಡಿಸಿತ್ತು. ಆಗ ಕುಟುಂಬದ ನೆರವಿಗೆ ಜಿಲ್ಲಾ ಉಸ್ತುವರಿ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಮತ್ತು ಸ್ಥಳೀಯರು ಮನೆಗೆ ಭೇಟಿ, ಘಟನೆ ವಿಷಾದ ವ್ಯಕ್ತಪಡಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರದಿಂದ ದೊರೆಯುವಂತಹ ಶೀಘ್ರದಲ್ಲಿ ಒದಗಿಸುವ ಭರವಸೆ ನೀಡಿದ್ದರು.
ಇನ್ನು ಸರ್ಕಾರ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹುಮ್ನಬಾದ್, ಜಿಲ್ಲಾ ಉಸ್ತುವರಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಡಿ.ಎಸ್.ಹೊಲಿಗೇರಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಭೇಟಿ ಕುಟುಂಬಕ್ಕೆ ಸ್ವಾಂತನ ಹೇಳಿ, ವೈಯಕ್ತಿಕ ಸಹಾಯ ಧನ ನೀಡಿದ್ರು.
ಜತೆಗೆ ಈ ಘಟನೆ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಿ ಪತ್ನಿಗೆ ನೌಕರಿ ಸಿಗುವವರೆಗೂ ಸಾಹೇಬ್ ಪಟೇಲ್ ವೇತನ, ಸಿಎಂ ನಿಧಿ ಪರಿಹಾರ ಧನ, ಮಕ್ಕಳಿಗೆ ವಿದ್ಯಾಬ್ಯಾಸ ಮೂರ್ನಾಲ್ಕು ತಿಂಗಳಲ್ಲಿ ಈಡೇರಿಸುವುದಾಗಿ ಹೇಳಿದ್ರು. ಆದರೆ ಆರು ತಿಂಗಳು ಗತಿಸಿದರೂ, ಸಿಎಂ ಪರಿಹಾರ ಹಣ, ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆಯಾಗಿಲ್ಲ.
ಸಾಹೇಬ್ ಪಟೇಲ್ ಮರಣದಿಂದ ಬರುವಂತಹ 8500 ರೂ. ಪಿಂಚಣಿ ಸೌಲಭ್ಯ ಇತ್ತೀಚೆಗೆ ಖಾತೆಗೆ ಬಂದಿದೆ. ಅನುಕಂಪದ ಆಧಾರದ ಮೇಲೆ ಸಾಹೇಬ್ ಪತ್ನಿಗೆ ನೌಕರಿ ಒದಗಿಸುವ ಹಿನ್ನೆಲೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ರೂ, ಪುನಃ ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಸೂಚಿದ್ದಾರೆ.
ಒಂದು ಹೆಣ್ಣು ಮಗು, ಇಬ್ಬರು ಗಂಡು ಮಕ್ಕಳಿದ್ದಾರೆ. ಎಲ್ಲರೂ ಸಾಹೇಬ್ ಪಟೇಲ್ ವೇತನ ಆಧಾರದ ಮೇಲೆ ಜೀವನ ಸಾಗಿಸುತ್ತಿದ್ದೆವು. ಆದರೆ ಅವರು ಮೃತಪಟ್ಟ ಮೇಲೆ ಕುಟುಂಬವು ಆರ್ಥಿಕ ಪರಿಸ್ಥಿತಿ ಸಂಕಷ್ಟ ಸಿಲುಕಿದ್ದು, ನಮಗೆ ಪರಿಹಾರ ಧನ, ಮಕ್ಕಳಿಗೆ ವಿದ್ಯಾಭ್ಯಾಸ, ನೌಕರಿಯನ್ನ ಅದಷ್ಟು ಬೇಗ ನೀಡಬೇಕು. ಕೆಲವು ದಿನಗಳ ಹಿಂದೆ ಸಿಂಧನೂರು ಪಟ್ಟಣಕ್ಕೆ ಸಿಎಂ ಆಗಮಿಸಿದ ವೇಳೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಪರಿಹಾರ ಮಾತ್ರ ಇದುವರೆಗೆ ಬಂದಿಲ್ಲ ಎಂಬುದು ಸಾಹೇಬ್ ಪಟೇಲ್ ಅಬೇದಾ ಬೇಗಂ ಆಳಲಾಗಿದೆ.