ರಾಯಚೂರು: ಲಿಂಗಸುಗೂರು ತಾಲೂಕು ಈಚನಾಳ ಕಾಳಜಿ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಕರಕಲಗಡ್ಡಿ ಸಂತ್ರಸ್ತ ಕುಟುಂಬಗಳು ಕಣ್ಣೀರು ಹಾಕುತ್ತಿದ್ದಾರೆ.
ಕೃಷ್ಣಾ ನದಿ ಪ್ರವಾಹದಿಂದ ನಡುಗಡ್ಡೆ ಪ್ರದೇಶದಿಂದ ಜನರನ್ನು ಒತ್ತಾಯದ ಮೇರೆಗೆ ಹಲವು ಭರವಸೆ ನೀಡಿ ಕರೆ ತಂದಿದ್ದ ತಾಲೂಕು ಆಡಳಿತ, ಬೇಡಿಕೆಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ವಾರದಿಂದ ಕಾಳಜಿ ಕೇಂದ್ರದ ಊಟ, ಉಪಹಾರ ಸ್ವೀಕರಿಸದ ಕುಟುಂಬಸ್ಥರು, ಹೊರಗಡೆಯಿಂದ ಊಟ, ಉಪಹಾರ ತರಿಸುತ್ತಿದ್ದಾರೆ. ನಮ್ಮನ್ನ ಶಾಶ್ವತ ಸ್ಥಳಾಂತರ ಮಾಡಿ, ಇಲ್ಲವೇ ನಡುಗಡ್ಡೆಗೆ ಮರಳಿ ಬಿಟ್ಟು ಬನ್ನಿ ಎಂದು ಪಟ್ಟು ಹಿಡಿದಿದ್ದಾರೆ.
ಕಾಳಜಿ ಕೇಂದ್ರದ ಸೌಲಭ್ಯ ವಿರೋಧಿಸಿದ್ದರೂ ಕೂಡ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ನಾವು ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಅಧಿಕಾರಿಗಳು ತಾತ್ಸಾರದಿಂದ ನೋಡುತ್ತಿದ್ದಾರೆ. ಕೇಂದ್ರದಿಂದ ಬಿಡುಗಡೆ ಮಾಡಿ, ಸಾಮಾಜಿಕ ನ್ಯಾಯ ಒದಗಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ನಮ್ಮನ್ನು ಒತ್ತಾಯಪೂರ್ವಕವಾಗಿ ಕರೆ ತಂದು ಕೂಡಿ ಹಾಕಿದ್ದು, ಮಾನಸಿಕ ಅಘಾತವಾಗಿದೆ. ಕೇಂದ್ರದಿಂದ ಬೇಗ ಮುಕ್ತಿ ಕೊಡಿಸಿ. ಪರಿಹಾರ ನೀಡುವ ಭರವಸೆ ನೀಡಿದ್ದು ಹುಸಿಯಾಗಿದೆ. ಶಾಶ್ವತ ಸ್ಥಳಾಂತರ ಗಗನ ಕುಸುಮವಾಗಿದೆ ಎಂದು ಸಂತ್ರಸ್ತ ದೊಡ್ಡಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.