ರಾಯಚೂರು: ಕರ್ನಾಟಕ ಹಾಗೂ ಉತ್ತರ ಪ್ರದೇಶ ರಾಜ್ಯದ ಸಂಬಂಧ ಶ್ರೀರಾಮ-ಹನುಮಂತನ ಸಂಬಂಧ ಇದ್ದಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಭಾಷಣವನ್ನು ಪ್ರಾರಂಭಿಸಿದ ಅವರು, "ತುಂಗಾ, ಕೃಷ್ಣ ನದಿ ಹರಿಯುವ ಹರಿದಾಸರ ನಾಡಿನ ಜನರಿಗೆ ನಮಸ್ಕಾರ", ಇದು ಹರಿದಾಸರ ಭೂಮಿ, ಭಾರತದ ಸನಾತನ ಧರ್ಮದ ಮನೆ ಮನೆಗೆ ಸಂದೇಶ ನಾಡಿನ ತುಂಬಾ ಹರಡಿದ್ದಾರೆ. ನಿಜಾಮರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ನಾಗರಿಕರಿಗೆ ನಮನ ಸಲ್ಲಿಸುತ್ತೇನೆ. ನಾನು ಅಯೋಧ್ಯೆ ಪುಣ್ಯ ಭೂಮಿಯಿಂದ ಇಲ್ಲಿಗೆ ಬಂದಿದ್ದೇನೆ. ಉತ್ತರ ಕರ್ನಾಟಕ ಮತ್ತು ಕರ್ನಾಟಕದ ಸಂಬಂಧ, ಪುರಾಣದಲ್ಲಿನ ರಾಮ-ಹನುಮನ ಸಂಬಂಧ ಇದ್ದಂತೆ. ನಾನು ಇವತ್ತು ಹನುಮಂತನ ಭೂಮಿಗೆ ಬಂದಿದ್ದಕ್ಕೆ ಖುಷಿಯಾಗಿದೆ ಎಂದು ಹೇಳಿದ್ರು.
ಭಾರತವೂ ಮೋದಿ ನೇತೃತ್ವದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಇಡೀ ವಿಶ್ವವೇ ನಮ್ಮ ದೇಶವನ್ನು ಎದುರು ನೋಡುವಂತೆ ಮಾಡಿದೆ. ರಾಮಾಯಣ ಕಾಲದಲ್ಲಿ ಹನುಮಂತ ತ್ಯಾಗ ಮಾಡಿದಂತೆ, ಈಗ ದೇಶಕ್ಕಾಗಿ ಮೋದಿ ತ್ಯಾಗ ಮಾಡುತ್ತಿದ್ದಾರೆ. ರೈಲು, ವಿಮಾನ, ಐಐಟಿ, ಏಮ್ಸ್ ಹೀಗೆ ಹತ್ತಾರು ಅಭಿವೃದ್ಧಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ರೈತರು ತಲೆಬಾಗಿಕೊಂಡು ಓಡಾಟ ಮಾಡುವ ಪರಿಸ್ಥಿತಿ ಇತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ರೈತರು ತಲೆ ಎತ್ತಿ ಓಡಾಡುತ್ತಿದ್ದಾರೆ ಎಂದು ಡಬಲ್ ಇಂಜಿನ್ ಸರ್ಕಾರವನ್ನು ಯೋಗಿ ಆದಿತ್ಯಾನಾಥ್ ಹೊಗಳಿದರು.
ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿಯೂ ನಮ್ಮ ಸರ್ಕಾರದ ಕೊಡುಗೆಯಾಗಿದೆ. ಉತ್ತರ ಪ್ರದೇಶದಲ್ಲಿ ವಾಲ್ಮೀಕಿ ಜಯಂತಿ ದಿನ ಎಲ್ಲಾ ದೇವಸ್ಥಾನದಲ್ಲಿ ಪೂಜೆ ಮಾಡಿ ರಾಮಾಯಣವನ್ನು ಓದಲಾಗುತ್ತದೆ. ಡಬಲ್ ಇಂಜಿನ್ ಸರ್ಕಾರವು 'ಸಬ್ ಕಾ ಸಾಥ್ ಸಬ್ ವಿಕಾಸ್' ಮಾಡುವ ಸರ್ಕಾರವಾಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ಕಾಂಗ್ರೆಸ್ ಪಕ್ಷವು ಯುವ ಜನತೆ ಜೊತೆಗೆ ಭೇದಭಾವ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಟೀಂ ಇಂಡಿಯಾ ಕ್ಯಾಪ್ಟನ್ ತರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತೆ, ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯುತ್ತ ಬಂದಿದೆ, ಆ ಶುಭ ಕಾರ್ಯಕ್ಕೆ ನಿಮ್ಮನ್ನು ಕರೆಯಲು ನಾನು ಬಂದಿದ್ದೇನೆ, ಹೊಸ ಅಯೋಧ್ಯೆ ದರ್ಶನ ನಿಮಗೆ ಸಿಗಲಿದೆ. ಬಿಜೆಪಿ ಅಭ್ಯರ್ಥಿ ಡಾಕ್ಟರ್ ಇದ್ದಾರೆ, ಎಲ್ಲಾ ರೋಗಕ್ಕೆ ಔಷಧಿ ಗೊತ್ತು, ಕಾಂಗ್ರೆಸ್ ಓಡಿಸುವುದು ಗೊತ್ತು ಎಂದರು. ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಶಿವರಾಜ್ ಪಾಟೀಲ್ ಅವರನ್ನು ಬೆಂಬಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ರಾಯಚೂರಿನ ಜನತೆಗೆ ಕೋರಿದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ ಸುಳ್ಳು ಗ್ಯಾರಂಟಿ ಕಾರ್ಡ್.. ಭ್ರಷ್ಟಾಚಾರದಿಂದ ಕರ್ನಾಟಕ ಬಚಾವ್ ಮಾಡಬೇಕು: ಪ್ರಧಾನಿ ಮೋದಿ ಹೇಳಿಕೆ