ರಾಯಚೂರು: ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲು ಆಗ್ರಹಿಸಿ ಪ್ರತಿಭಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾದಲ್ಲಿನ ಸಂಸದ ರಾಜಾ ಅಮರೇಶ್ವರ ನಾಯಕ ನಿವಾಸದ ಬಳಿ ಅಸ್ಪೃಶ್ಯ ಜಾತಿಗಳ ಮಹಾಸಭಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು ಅಸ್ಪೃಶ್ಯರಲ್ಲದ ಬಂಜಾರ, ಭೋವಿ, ಕೊರಮ, ಕೊರಚ ಸೇರಿದಂತೆ ಸ್ಪೃಶ್ಯ ಜಾತಿಯವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಸಾಂವಿಧಾನಿಕವಾಗಿ ಸೇರ್ಪಡೆ ಮಾಡಿರುವುದರಿಂದ ಅಸ್ಪೃಶ್ಯ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಪರಿಶಿಷ್ಟರ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರಕ್ಕೆ ಈ ಕುರಿತು ಸ್ಪಷ್ಟ ಮಾಹಿತಿ ತಿಳಿಸಲು ಸೂಚಿಸಿದೆ. ರಾಜ್ಯ ಸರ್ಕಾರ ವರದಿ ಸಲ್ಲಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ. ತಾವು ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲು ಅಗತ್ಯ ಸಲಹೆ ರಾಜ್ಯ ಸರ್ಕಾರಕ್ಜೆ ನೀಡಬೇಕು ಎಂದು ಈ ವೇಳೆ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ಅಸ್ಪೃಶ್ಯ ಜಾತಿಗಳ ಮಹಾಸಭಾ ಮುಖಂಡ ಹೆಚ್.ಬಿ.ಮುರಾರಿ ಮಾತನಾಡಿ ಅಸ್ಪೃಶ್ಯರಲ್ಲದ ಜಾತಿಗಳನ್ನು ಅಸಾಂವಿಧಾನಿಕವಾಗಿ ಸೇರ್ಪಡೆ ಮಾಡಿದ್ದರಿಂದ ನೈಜ ಅಸ್ಪೃಶ್ಯರು ಶೈಕ್ಷಣಿಕ, ರಾಜಕೀಯ, ಉದ್ಯೋಗ ಕ್ಷೇತ್ರದಲ್ಲಿ ಭಾರಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.