ರಾಯಚೂರು: ಸಾಲು ಸಾಲಾಗಿ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿರುತ್ತವೆ. ವಾಹನ ಸವಾರರು ಎಷ್ಟೇ ಹಾರ್ನ್ ಹೊಡೆದರೂ ದನಗಳು ಕದಲೋದೇ ಇಲ್ಲ. ಇದು ರಾಯಚೂರಿನ ಪ್ರಮುಖ ರಸ್ತೆಗಳಾದ ಗಂಜ್, ಗೋಶಾಲಾ ರಸ್ತೆ, ಬಸವನಬಾವಿ ರಸ್ತೆ, ಬಸವೇಶ್ವರ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಕಂಡು ಬರುವ ದೃಶ್ಯ.
ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡಾಡಿ ದನಗಳು ರಸ್ತೆಯ ಬದಿಯಲ್ಲೇ ರಾಜಾರೋಷವಾಗಿ ಮಲಗುವುದರಿಂದ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.
ಮಾಲೀಕರ ಮನೆಯಲ್ಲಿರಬೇಕಾದ ದನಗಳು, ಅಹಾರ ಹುಡುಕುತ್ತಾ ರಸ್ತೆಗಿಳಿದು ರಸ್ತೆ ಮಧ್ಯೆ ಓಡಾಡುತ್ತಾ ರಸ್ತೆ ಬದಿಯಲ್ಲಿಯೇ ಮಲಗುತ್ತಿದೆ. ಹಿಂಡು ಹಿಂಡಾಗಿ ಮಲಗುವ ದನಗಳಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮೊದಲೇ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಗೂ ಸ್ಥಳವಿಲ್ಲದೇ ಜನರು ಪರದಾಡುತಿದ್ದಾರೆ. ಅಲ್ಲದೇ ರಸ್ತೆಯಲ್ಲಿ ಅಡ್ಡಾದಿಡ್ಡಿ ಮಲಗುವ ಹಸುಗಳಿಂದಾಗಿ ಪಾದಚಾರಿಗಳೂ ಸಹ ರಸ್ತೆ ದಾಟಲೂ ಪಜೀತಿ ಉಂಟಾಗಿದೆ ಹಾಗೂ ವಾಹನ ಸವಾರರು ರಸ್ತೆ ಮಧ್ಯೆ ದನಗಳು ಅಡ್ಡ ಬಂದಾಗ ಎಷ್ಟೇ ಹಾರ್ನ್ ಹೊಡೆದರೂ ಕದಲುವುದಿಲ್ಲ. ರಸ್ತೆಯಲ್ಲಿ ಅಡ್ಡಾದಿಡ್ಡಿ ಮಲಗಿದ ದನಗಳಿಂದಾಗಿ ವಾಹನ ಸವಾರರು ಅಯತಪ್ಪಿ ಬಿದ್ದ ಹಾಗೂ ಅಪಘಾತ ಸಂಭವಿಸಿದ ಉದಾಹರಣೆಗಳೂ ಇವೆ.
ಈ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಕಳೆದ ಹಲವು ವರ್ಷಗಳಿಂದ ಈ ಬಿಡಾಡಿ ದನಗಳ ಉಪಟಳ ತಪ್ಪಿದ್ದಲ್ಲ. ಇದರಿಂದಾಗಿ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ನಗರಸಭೆಯಾಗಲಿ, ಸಂಚಾರಿ ಪೊಲೀಸರಾಗಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳಿವೆ.