ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಲು ಶಾಸಕ ಕೆ. ಶಿವನಗೌಡ ನಾಯಕ ಕಾರಣವೆಂದು ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ದೂರಿದರು.
ನಗರದ ಅವರ ನಿವಾಸದಲ್ಲಿ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಯಚೂರು ಲೋಕಸಭಾ ಕ್ಷೇತ್ರ ಎಸ್‌ಟಿ ಮೀಸಲು ಇರುವುದರಿಂದ ಮಾನಸಿಕವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೆ. ಈ ನಿಟ್ಟಿನಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಮುಖಂಡರನ್ನ, ಕಾರ್ಯಕರ್ತರನ್ನ ಭೇಟಿಯಾಗಿ ಸಿದ್ಧತೆ ಮಾಡಿಕೊಂಡು, ಹೈಕಮಾಂಡ್ ಬಳಿ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೆ. ಬಹುತೇಕ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ರು. ಆದ್ರೆ ಶಿವನಗೌಡ ನಾಯಕ ಮಾತ್ರ ಟಿಕೆಟ್ ನೀಡುವುದಕ್ಕೆ ಬೆಂಬಲಿಸಿಲ್ಲ. ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಅವರೇ, ಆದರೆ ಇಂದು ಅವರ ಮನಸ್ಸಿನಲ್ಲಿ ಏನಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣಾ ಸ್ಪರ್ಧೆಗೆ ಟಿಕೆಟ್ ತಪ್ಪಿಸಿದವರು ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ತಪ್ಪಿಸಿದರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತಿಪ್ಪರಾಜ್, ನನಗೂ ರಾಜಕೀಯ ಬರುತ್ತೆ. ಇಂದು ಟಿಕೆಟ್ ತಪ್ಪಿಸಬಹುದು. ಆದ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಂದಲೂ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ನನಗೆ ಟಿಕೆಟ್ ತಪ್ಪಿರುವುದಕ್ಕೆ ಆಕ್ರೋಶವಿರುವುದು ನಿಜ. ಆದರೆ ನಮಗೆ ದೇಶ ಮೊದಲು, ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.