ರಾಯಚೂರು : ಕರ್ನಾಟಕ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬನ ಬ್ಯಾಗ್ ಕದ್ದು ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕರ್ನಾಟಕ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶ ಮೂಲದ ಗ್ವಾಲಿಯರ್ ನಿವಾಸಿ ಸಂಜೀವ್ ಕುಮಾರ್ ಠಾಕೂರ್ ಎಂಬ ಯುವಕನ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿದ್ದಾರೆ. ಈತ ಬೆಂಗಳೂರಿನಿಂದ ಗ್ವಾಲಿಯರ್ಗೆ ತೆರಳಲು ಕರ್ನಾಟಕ ಎಕ್ಸ್ಪ್ರೆಸ್ (ನಂ.12627) ಜನರಲ್ ಬೋಗಿಯಲ್ಲಿ ಬ್ಯಾಗ್ ಪಕ್ಕದಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ. ರಾತ್ರಿ ವೇಳೆ ನಿದ್ರೆಗೆ ಜಾರಿದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎದ್ದು ನೋಡಿದಾಗ ಬ್ಯಾಗ್ ಕಳ್ಳತನವಾಗಿದ್ದು ತಿಳಿದಿದೆ.
15,999 ರೂ. ಮೌಲ್ಯದ ಮೊಬೈಲ್, ಸಿಮ್ ಕಾರ್ಡ್, 5 ಸಾವಿರ ರೂ. ನಗದು ಹಣ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲೆಗಳು ಮತ್ತು ಬಟ್ಟೆಗಳು ಬ್ಯಾಗ್ನಲ್ಲಿ ಇತ್ತೆಂದು ಹಣ ಕಳೆದುಕೊಂಡ ಸಂಜೀವ್ ಕುಮಾರ್ ಠಾಕೂರ್ ತಿಳಿಸಿದ್ದಾರೆ. ಈ ಕುರಿತು ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.