ಲಿಂಗಸುಗೂರು: ರಾಜ್ಯವ್ಯಾಪಿ ಶಾಖೆಗಳನ್ನು ತೆರೆದುಕೊಂಡಿರುವ ಸುಕೋ ಬ್ಯಾಂಕ್ ಗ್ರಾಹಕರ ಸೇವೆ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದೆ. ಗ್ರಾಮೀಣ ಪ್ರದೇಶಕ್ಕೂ ಸೇವೆ ವಿಸ್ತರಣೆ ಮಾಡಬೇಕು ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಸಲಹೆ ನೀಡಿದರು.
ಲಿಂಗಸುಗೂರಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸೌಹಾರ್ದ ಒಕ್ಕೂಟ ರಚನೆ ಮೂಲಕ ಸಹಕಾರಿ ಕ್ಷೇತ್ರದಲ್ಲಿ ರಾಯಚೂರು ಜಿಲ್ಲೆ ಹೆಸರು ಉಳಿಯುವಂತೆ ಸುಕೋ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಸುಕೋ ಬ್ಯಾಂಕ್ ಅಧ್ಯಕ್ಷ ಮೊಹಿತ್ ಮಸ್ಕಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 28 ಶಾಖೆಗಳನ್ನು ಹೊಂದಿದ್ದೇವೆ. ರಾಷ್ಟ್ರಿಕೃತ ಬ್ಯಾಂಕ್ ಸೌಲಭ್ಯ ಕೂಡ ನೀಡಿದ್ದೇವೆ. 6 ವರ್ಷದಲ್ಲಿ ಲಿಂಗಸುಗೂರು ಶಾಖೆ 30 ಕೋಟಿ ರೂ. ವ್ಯವಹಾರ ನಡೆಸಿದೆ. ಗ್ರಾಹಕರು ಕೂಡ ಬ್ಯಾಂಕ್ ಜೊತೆ ವ್ಯವಹಾರಿಕವಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಾಜಿ ತಾಲೂಕು ಅಧ್ಯಕ್ಷ ಡಾ. ರಾಜೇಂದ್ರ ಮನಗುಳಿ, ನಿರ್ದೇಶಕ ಜಿ. ಸತ್ಯಂ, ಶಾಖಾ ವ್ಯವಸ್ಥಾಪಕ ಮೌನೇಶ ಕಮ್ಮಾರ್ ಭಾಗವಹಿಸಿದ್ದರು.