ರಾಯಚೂರು: ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿ ನಾಲ್ವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಅರ್ಚನಾ ನೇತೃತ್ವದ ತನಿಖಾ ತಂಡ ನಗರದ ಹೊರವಲಯ ರಾಂಪೂರದ ಜಲ ಶುದ್ಧೀಕರಣ ಘಟಕವನ್ನು ಪರಿಶೀಲಿಸಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರ್ಚನಾ, 'ನೀರಿನ ಶುದ್ಧೀಕರಣ ಹಾಗೂ ಸರಬರಾಜು ಮಾಡುವಲ್ಲಿ ಸಿಬ್ಬಂದಿಯಿಂದ ನಿರ್ಲಕ್ಷ್ಯವಾಗಿದೆ. ಈಗಾಗಲೇ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಉಳಿದವರ ತಪ್ಪಿನ ಬಗ್ಗೆ ತನಿಖೆ ನಡೆಯುತ್ತಿದೆ. ಶುದ್ಧೀಕರಣ ಘಟಕದಲ್ಲಿನ ಪ್ರಯೋಗಾಲಯ ಎರಡು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿಲ್ಲ, ಸಿಬ್ಬಂದಿಯೂ ಇಲ್ಲ. ಜಲ ಶುದ್ಧೀಕರಣಕ್ಕೆ ಬೇಕಾದ ಅಗತ್ಯ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿಲ್ಲ'.
'ನಗರದಲ್ಲಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ಬದಲಾಯಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗಿರುವುದಕ್ಕೆ ಶುದ್ಧೀಕರಣ ಘಟಕದ ಜೊತೆಗೆ ಪೈಪ್‌ಲೈನ್ ಕೂಡ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಸದ್ಯ ಪ್ರಸ್ತಾಪವಿಲ್ಲ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ನೀರಿನ ಶುದ್ಧೀಕರಣ ಹಾಗೂ ಸರಬರಾಜು ವ್ಯವಸ್ಥೆಯ ಲೋಪಗಳನ್ನು ಪರಿಶೀಲಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ನಗರಸಭೆಗೆ ಸೂಚನೆ ನೀಡುತ್ತೇವೆ' ಎಂದು ತಿಳಿಸಿದರು.
ಇದನ್ನೂ ಓದಿ: ಕಲುಷಿತ ನೀರು ಕುಡಿದು ಮತ್ತೊಬ್ಬ ವ್ಯಕ್ತಿ ಸಾವು? ರಾಯಚೂರಿನಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆ!