ರಾಯಚೂರು: ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ತಂದೆಯನ್ನು ಮಗ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ದೇವರಭೂಪೂರು ಗ್ರಾಮದಲ್ಲಿ ನಡೆದಿದೆ. ತಿಮ್ಮಣ್ಣ ಬಂಡಿ (55) ಕೊನೆಯಾದವ. ಶೀಲವಂತ ಬಂಡಿ ಆರೋಪಿ ಪುತ್ರ ಎಂದು ಗುರುತಿಸಲಾಗಿದೆ.
ಮದ್ಯ ಸೇವನೆ ಮಾಡಿ ಬಂದು ತಾಯಿಯನ್ನು ಹೊಡೆಯುತ್ತಿದ್ದ ಎಂಬ ಕಾರಣಕ್ಕೆ ಕಲ್ಲಿನಿಂದ ಹಲ್ಲೆ ಮಾಡಿ ತಂದೆಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಲಿಂಗಸೂಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಲಿಂಗಸೂಗೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಗಂಡನ ಹತ್ಯೆಗೈದ ಪತ್ನಿ: ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡನನ್ನು ಪತ್ನಿಯೇ ಹತ್ಯೆಗೈದ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ವ್ಯಕ್ತಿಯನ್ನು ಬಾಬು ಕಲ್ಲಪ್ಪ ಕುರ್ಕಿ (48) ಎಂದು ಗುರುತಿಸಲಾಗಿದೆ. ಪತ್ನೊ ಮಹಾದೇವಿ ಕರ್ಕಿ ಕೊಲೆ ಆರೋಪಿ. ಬಾಬು ಕಲ್ಲಪ್ಪ ಕುರ್ಕಿ ಕುಡಿತದ ಚಟಕ್ಕೆ ದಾಸನಾಗಿದ್ದನು. ಇದರಿಂದ ಪತ್ನಿ ಬೇಸತ್ತಿದ್ದು, ನಿದ್ದೆ ಮಾತ್ರೆ ನೀಡಿ, ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದಳು ಎಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.
ಹಳೆ ವೈಷಮ್ಯ-ವ್ಯಕ್ತಿ ಭೀಕರ ಹತ್ಯೆ: ಅ.30ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ರಬಣಕಲ್ ಗ್ರಾಮದ ಪ್ರಸಾದ್ (38) ಕೊಲೆಯಾದವರು. ಬೆಳಿಗ್ಗೆ ಭತ್ತದ ಗದ್ದೆಗೆ ನೀರು ಕಟ್ಟಲು ತೆರಳಿದ್ದಾಗ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೋಲಾರದಲ್ಲಿ ಕಾಂಗ್ರೆಸ್ ಮುಖಂಡನ ಕೊಲೆ: ಅಕ್ಟೋಬರ್ 23ರಂದು ದಲಿತ ಮತ್ತು ಕಾಂಗ್ರೆಸ್ನ ಸ್ಥಳೀಯ ಪ್ರಭಾವಿ ಮುಖಂಡರೊಬ್ಬರನ್ನು ಅಪರಿಚಿತರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿತ್ತು. ಇಲ್ಲಿನ ಹೊಗಳಗೆರೆ ರಸ್ತೆಯಲ್ಲಿರುವ ತೋಟದ ಸಮೀಪ ದುಷ್ಕರ್ಮಿಗಳು ಮುಖಂಡನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಮೃತರನ್ನು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂದು ಗುರುತಿಸಲಾಗಿತ್ತು. ಶ್ರೀನಿವಾಸನ್ ಅಲಿಯಾಸ್ ಕೌನ್ಸಿಲರ್ ಶ್ರೀನಿವಾಸ್ ಅವರು ಶ್ರೀನಿವಾಸಪುರದಲ್ಲಿ ಪ್ರಭಾವಿ ದಲಿತ ಮುಖಂಡರಾಗಿದ್ದರು. ಕಳೆದ ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕ ಪೊಲೀಸ್ ವಶಕ್ಕೆ