ರಾಯಚೂರು: ಕೌಟುಂಬಿಕ ಕಲಹದ ಹಿನ್ನೆಲೆ ತಂದೆಯ ಮೇಲೆಯೇ ಮಗ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಇ.ಜೆ ಗ್ರಾಮದಲ್ಲಿ ನಡೆದಿದೆ.
ದೇವರೆಡ್ಡಿ ಮಗನಿಂದ ಹಲ್ಲೆಗೊಳಗಾದ ತಂದೆ. ವಿರೇಶ್(ದೇವರೆಡ್ಡಿ ಮಗ) ಯಾವುದೇ ಕೆಲಸ ಮಾಡದೆ ತಿರುಗುತ್ತಿದ್ದ. ಅಲ್ಲದೆ ಹಣಕ್ಕಾಗಿ ಆಗಾಗ ತಂದೆಯನ್ನು ಪೀಡಿಸುತ್ತಿದ್ದನಂತೆ. ಅದಕ್ಕೆ ಏನಾದರೂ ಕೆಲಸ ಮಾಡು, ಖಾಲಿ ಯಾಕೆ ತೀರಗಾಡುತ್ತಿದ್ದಿಯಾ ಅಂತಾ ಬುದ್ಧಿವಾದ ಹೇಳಿದ್ದರು.
ಬುದ್ಧಿ ಕಲಿಯದ ವಿರೇಶ್ ಮತ್ತೆ ಹಣಕ್ಕಾಗಿ ತಂದೆಯನ್ನು ಪೀಡಿಸಿದಾಗ, ದೇವರೆಡ್ಡಿ ಹಣವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಮಗ ಇನ್ನಿಬ್ಬರ ಸಹಾಯದಿಂದ ಸ್ವಂತ ತಂದೆಯ ಮೇಲೆಯೇ ಮಾರಕಾಸ್ತ್ರದಿಂದ ದಾಳಿ ಮಾಡಿ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ದೇವರೆಡ್ಡಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗಳಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ರವಾನಿಸಲಾಗಿದೆ. ಪ್ರಕರಣ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.