ರಾಯಚೂರು : ಕೃಷ್ಣ, ತುಂಗಭದ್ರಾ ನದಿ ತೀರದ ನೀರಾವರಿ ಪ್ರದೇಶದಲ್ಲಿ ಅಧಿಕವಾಗಿ ಹಾವುಗಳು ಕಂಡು ಬರುತ್ತಿದ್ದು, ಹೊಲ-ಗದ್ದೆಗಳಿಗೆ ತೆರಳಿದ ರೈತರು ವಿಷಪೂರಿತ ಹಾವುಗಳ ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಪ್ರಸಕ್ತ ಜನವರಿಯಿಂದ ಇಲ್ಲಿಯ ವರೆಗೆ ಸರಿಸುಮಾರು 20ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ.
ಸಾರ್ವಜನಿಕರು ವಾಸಿಸುವ ಪ್ರದೇಶಗಳಲ್ಲಿಯೂ ಸಹ ಹಾವುಗಳು ಕಂಡು ಬರುತ್ತಿದ್ದು, ಅವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬೀಡಲಾಗುತ್ತಿದೆ. ಜಿಲ್ಲೆಯಲ್ಲಿ 20ಕ್ಕೂ ಉರಗ ರಕ್ಷಕರು ಇದ್ದಾರೆ. ಸದ್ಯ ರಕ್ಷಿತ ಹಾವುಗಳನ್ನು ವಿಷ ಸಂಗ್ರಹಣೆಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ. ಆದ್ರೆ ಅಂತಹ ಪ್ರಕರಣಗಳು ಬೆಳಕಿಗೆ ಬಂದಿಲ್ಲ.
ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತೇವೆ. ಯಾರು ವಿಷ ತೆಗೆಯುವವರಿಲ್ಲ. ವಿಷ ತೆಗೆಯಬೇಕಾದ್ರೆ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಿಗೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಅಪರಾಧವಾಗುತ್ತದೆ ಎಂದು ಉರಗ ರಕ್ಷಕ ಅಫ್ಸರ್ ಹುಸೇನ್ ಹೇಳಿದರು.