ರಾಯಚೂರು: ರಾಜಕಾರಣಿಗಳು ಸಹ ಗಾಂಧಿ, ಲೋಹಿಯಾ, ನೆಹರು, ಅಂಬೇಡ್ಕರ್ ಅವರ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಜನಪ್ರತಿನಿಧಿಗಳಿಗೆ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಸಲಹೆ ನೀಡಿದರು.
ಸಿಂಧನೂರಿನ ಯಲವಂಚಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಸಮ್ಮೇಳನ ಉದ್ಘಾಟನೆ ಮಾಡಿ ಮಾತಾನಾಡಿದರು. ಕನ್ನಡ ಸಾಹಿತ್ಯ ತನ್ನದೇ ಇತಿಹಾಸ ಹೊಂದಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವ ಪೀಳಿಗೆಯದು. ಶಿಕ್ಷಕರು ಕೂಡಾ ನಾಡು ನುಡಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಇಂದಿನ ರಾಜಕೀಯ ಸ್ಥಿತಿ ಬಹಳ ಗಂಭೀರವಾಗಿದೆ. ಅದಕ್ಕೆ ರಾಜಕಾರಣಿಗಳು ಗಾಂಧಿ, ಲೋಹಿಯಾ, ನೆಹರು, ಅಂಬೇಡ್ಕರ್ ಅವರ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮ್ಮೇಳನ ದ ಅಧ್ಯಕ್ಷ ಶಾಶ್ವತ ಸ್ವಾಮಿ ಮುಕ್ಕುಂದಿಮಠ ಮಾತನಾಡಿ, ಹೈ.ಕ ಭಾಗದಲ್ಲಿ ರಾಯಚೂರು ಜಿಲ್ಲೆ ಅತಿ ಹಿಂದುಳಿದ ಪ್ರದೇಶವಾಗಿದೆ. ಅಭಿವೃದ್ಧಿಗೆ ಸಾಕಷ್ಟು ಸಂಪತ್ತು, ಮಾನವ ಸಂಪನ್ಮೂಲವಿದ್ದರೂ ಹಿಂದುಳಿದ ಹಣೆಪಟ್ಟಿಯಿಂದ ಹೊರಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಕೆಯಲ್ಲಿನ ನೈಸರ್ಗಿಕ, ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದಕ್ಕೆ ಎಲ್ಲರೂ ಜಾಗೃತರಾಗಬೇಕಿದೆ ಎಂದು ಹೇಳುತ್ತಾ ಕನ್ನಡ ಸಾಹಿತ್ಯದ ಇತಿಹಾಸವನ್ನು ವಿವರಿಸಿದರು.