ರಾಯಚೂರು: ಮಾನ್ವಿ ತಹಶೀಲ್ದಾರ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ, ಆರೋಪಿತರು ಹಾಗೂ ದೂರುದಾರರು ಸಹಾಯಕ ಆಯುಕ್ತರ ಮುಂದೆ ಘಟನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿಂದು ದೂರಿಗೆ ಸಂಬಂಧಿಸಿದಂತೆ ಆರೋಪಿತರು ಹಾಗೂ ದೂರುದಾರರು ತಮ್ಮ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು, ಮುಂದಿನ ವಿಚಾರಣೆಯನ್ನು ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿ ನಡೆಸಲಿದೆ.
ದೂರುದಾರರಾದ ಶಿರಸ್ತೇದಾರರು ಮಾಧ್ಯಮಗಳೊಂದಿಗೆ ಮಾತನಾಡಿ, 2013ರ ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿ ಮುಖಾಂತರ ದೂರಿನ ವಿಚಾರಣೆ ನಡೆಯಲಿದೆ. ಸಮಿತಿಯ ನಿರ್ಣಯಕ್ಕೆ ನಾನು ಬದ್ಧವಾಗಿದ್ದೇನೆ. ಆರೋಪಿತರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಸಮಿತಿಯಿಂದಲೇ ದೂರು ದಾಖಲಾಗಲಿದೆ ಎಂದು ಹೇಳಿದರು.
ಈಗಾಗಲೇ ನಾನು ಮಾನಸಿಕವಾಗಿ ನೊಂದಿದ್ದು, ಒಂದು ಹೆಜ್ಜೆ ಮುಂದೆ ಬಂದು ದೂರು ನೀಡಿದ್ದೇನೆ. ಮಹಿಳೆಯರು ಯಾರಾದರೂ ಕಚೇರಿಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಹಿರಿಯ ಅಧಿಕಾಗಳ ಗಮನಕ್ಕೆ ತರುವುದು ಒಳಿತು ಎಂದು ಹೇಳಿದರು.
ಜಿಲ್ಲಾಧಿಕಾರಿ ಆದೇಶದಂತೆ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಮುಂದಿನ ವಿಚಾರಣೆ ನಡೆಸಲಿದೆ ಎಂದು ನೊಂದ ಮಹಿಳೆ ಹೇಳಿದರು.