ರಾಯಚೂರು : ಸಣ್ಣ ರೈತರು, ಭೂ ರಹಿತ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಕಳೆದ ಸಮ್ಮಿಶ್ರ ಸರ್ಕಾರ ಕೊನೆ ಗಳಿಗೆಯಲ್ಲಿ ಋಣಮುಕ್ತ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಈ ಕಾಯ್ದೆ ಅನುಷ್ಠಾನಗೊಳ್ಳದೆ ಜಿಲ್ಲೆಯಲ್ಲಿ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.
ಕುಮಾರಸ್ವಾಮಿಯವರು ತಮ್ಮ ಅಧಿಕಾರಾವಧಿಯ ಕೊನೆಯ ಗಳಿಗೆಯಲ್ಲಿ ಬಡವರ, ಸಣ್ಣ ಹಿಡುವಳಿದಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದರು. ಆದರೆ, ಯೋಜನೆಯ ಲಾಭ ಪಡೆಯಲು ಜಿಲ್ಲಾ ವಿಭಾಗಾಧಿಕಾರಿಗಳಿಗೆ ಕೇಳಿದರೆ ಇನ್ನೂ ಸರ್ಕಾರದಿಂದ ಅಧಿಕೃತ ಆದೇಶ ಪ್ರತಿ ಕಂದಾಯ ಇಲಾಖೆಗೆ ಸೇರದ ಕಾರಣ ಯೋಜನೆಯ ಲಾಭ ದೊರೆಯದಂತಾಗಿದೆ. ಬಡವರನ್ನು ಖಾಸಗಿ ಲೇವಾದೇವಿದಾರರ ಕಪಿಮುಷ್ಟಿ, ಹೆಚ್ಚಿನ ಬಡ್ಡಿಯಿಂದ ಸಾಲ ಪಡೆದವರಿಂದ ವಿಮುಕ್ತಗೊಳಿಸಲು ಕಾಯ್ದೆ ಪ್ರಕಟಿಸಿ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ.
ಈ ಕಾಯ್ದೆ ಅನುಷ್ಠಾನಗೊಂಡು 90 ದಿನಗಳಲ್ಲಿ ಪೂರ್ಣ ಗೊಳ್ಳಬೇಕಿದೆ. ಆದರೆ, ಕಾಯ್ದೆ ಜಾರಿಯಾಗಿ 10 ದಿನವಾದ್ರೂ ಅರ್ಜಿ ಸಲ್ಲಿಕೆಯಾಗಿಲ್ಲ. ಇದಕ್ಕೆ ಸರ್ಕಾರದಿಂದ ಕಾಯ್ದೆ ಕುರಿತ ಮಾರ್ಗದರ್ಶಿಸೂತ್ರ ಬಂದಿಲ್ಲ. ಇದಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲವಾದ್ದರಿಂದ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಕಾಯ್ದೆಯ ಅನುಕೂಲಗಳು:
ಖಾಸಗಿ ಲೇವಾದಾರರಿಂದ ಬಡ್ಡಿಗೆ ಹಣ ಪಡೆದವರು, ಒಡವೆ ಅಡಮಾನ ಮಾಡಿ ಸಾಲ ಮಾಡಿದವರು ಹಾಗೂ ಮೀಟರ್ ಬಡ್ಡಿಯಲ್ಲಿ ಸಾಲ ಪಡೆದವರು ಈ ಯೋಜನೆ ಅಡಿಯಲ್ಲಿ ಬರಲಿದ್ದು, ಈ ಕಾಯ್ದೆ ಪ್ರಕಾರ ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆದಿರುವವರು ಬಡ್ಡಿ ಹಾಗೂ ಅಸಲನ್ನು ಪಾವತಿ ಮಾಡಬೇಕಿಲ್ಲ. ಅವರು ಸಾಲ ಪಡೆದ ವೇಳೆ ಪಡೆದಂತಹ ರಶೀದಿ, ಇತರೆ ದಾಖಲೆಗಳನ್ನು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರೆ ಪರಿಶೀಲನೆಯ ನಂತರ ಋಣಮುಕ್ತರಾಗಿ ಮಾಡಲಾಗುತ್ತದೆ.
ಈ ಕಾಯ್ದೆಯಡಿ ನೋಡಲ್ ಅಧಿಕಾರಿಯನ್ನಾಗಿ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಧಿಕೃತ ಆದೇಶ ಬಾರದೆ ಉತ್ತಮ ಯೋಜನೆಗೆ ಹಿನ್ನಡೆಯಾಗಿದೆ. ಇದಕ್ಕೆ ಪ್ರಸ್ತುತ ಬಿಎಸ್ವೈ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಆದೇಶ ಕಳುಹಿಸದ ಕಾರಣ ಹಿಂದಿನ ಸರ್ಕಾರ ಹೊಸ ಕಾಯ್ದೆಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.