ರಾಯಚೂರು: ನಿನ್ನೆ ನಗರದಲ್ಲಿ ನಡೆದ ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಆರು ಜನರ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ನಗರದ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಡಿ. ನೇತೃತ್ವದಲ್ಲಿ 6 ಜನರ ತಂಡವನ್ನು ರಚನೆ ಮಾಡಿ ಹಂತಕರನ್ನ ಬಂಧಿಸಲು ಬಲೆ ಬೀಸಲಾಗಿದೆ. ಮೂವರು ಶಂಕಿತ ಆರೋಪಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಹಳೆ ವೈಷಮ್ಯ ಮತ್ತು ಹಣದ ವಿಚಾರ ಸೇರಿದಂತೆ ಕೆಲ ವಿಚಾರದಲ್ಲಿನ ಮನಸ್ತಾಪದಿಂದಾಗಿ ಹತ್ಯೆ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹೊರ ಬರಲಿದೆ. ಇನ್ನು ಹತ್ಯೆಗೀಡಾದ ಗೇಟ್ ಲಕ್ಷ್ಮಣ ಮೇಲೆ 20 ವಿವಿಧ ಪ್ರಕರಣಗಳು ದಾಖಲಾಗಿದ್ದವು. ನಿನ್ನೆ ರಾತ್ರಿ 8:30ರ ಸುಮಾರಿಗೆ ರೈಲ್ವೆ ನಿಲ್ದಾಣ ಬಳಿ ಅಪರಿಚಿತರು ಮಾರಕಾಸ್ತ್ರಗಳಿಂದ ಗೇಟ್ ಲಕ್ಷ್ಮಣ(45)ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಘಟನೆಗೆ ಸಂಬಂಧಪಟ್ಟಂತೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.