ರಾಯಚೂರು: ರಸ್ತೆ ರಿಪೇರಿಗೆ ಸರ್ಕಾರ ಸ್ಪಂದಿಸದಿದ್ದಾಗ ಗ್ರಾಮಸ್ಥರೇ ಪರಸ್ಪರ ಸಹಕಾರದೊಂದಿಗೆ ರಸ್ತೆ ರಿಪೇರಿ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಬಳಿ ಹೂನೂರು ಗ್ರಾಮ ಪಂಚಾಯತ್ನಲ್ಲಿ ನಡೆದಿದೆ.
ಮರಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲಗಳಿಗೆ ಹೋಗುವ ದಾರಿ ಹಾಳಾಗಿತ್ತು. ರಸ್ತೆ ಅಕ್ಕಪಕ್ಕದಲ್ಲಿ ಜಾಲಿಗಿಡಗಳು ಬೆಳೆದು ಓಡಾಡುವುದು ಕಷ್ಟವಾಗಿತ್ತು. ರಸ್ತೆಯನ್ನು ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಪ್ರಯೋಜನವಾಗಿರಲಿಲ್ಲ.
ಗ್ರಾಮ ಪಂಚಾಯತ್ ಹಾಗೂ ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಹಣವನ್ನ ಗ್ರಾಮಸ್ಥರಿಂದಲೇ ಸಂಗ್ರಹಿಸಿಕೊಂಡು ರಸ್ತೆ ದುರಸ್ತಿ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 500 ರೂ ಕಳ್ಳತನದ ಆರೋಪ: ಮರ್ಯಾದೆಗಂಜಿ ಒಂದೇ ಕುಟುಂಬದ 6 ಮಂದಿಯಿಂದ ವಿಷಸೇವನೆ
ಹದಗೆಟ್ಟ ರಸ್ತೆಯಲ್ಲಿ ಕಲ್ಲುಗಳನ್ನು, ಮರಂ ಹಾಕಿಸಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಬೆಳೆದ ಜಾಲಿಗಿಡಗಳನ್ನ ಜೆಸಿಬಿ ಮೂಲಕ ತೆಗೆಸುತ್ತಿದ್ದಾರೆ. ಕೆಲವರು ತಮ್ಮದೇ ಟ್ರ್ಯಾಕ್ಟರ್ ಅನ್ನ ಬಳಸಿಕೊಂಡು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಜನರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂಬುದು ವಿಪರ್ಯಾಸ.