ರಾಯಚೂರು : ನಗರದ ಸರ್ಕಾರಿ ನೌಕರರ ಭವನದಲ್ಲಿ ಇಂದು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಆಡಳಿತದ ಬಗ್ಗೆ ಪ್ರಶ್ನೆ ಮಾಡದಂತಹ ವ್ಯವಸ್ಥೆ ನಿರ್ಮಾಣ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.
ದೇಶ ಸ್ವಾತಂತ್ರ್ಯವಾಗಿ 70 ವರ್ಷದಲ್ಲಿ ಇದ್ದಂತಹ ವಾತಾವರಣ ಈಗ ಇಲ್ಲ. ಬಡವರು, ದಲಿತರು, ಅಲ್ಪಸಂಖ್ಯಾತರಿಗೆ ಭಿನ್ನವಾಗಿ ನೋಡಲಾಗ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಆರ್ಎಸ್ಎಸ್ ದಬ್ಬಾಳಿಕೆ ನಡೆಸಲು ಮುಂದಾಗಿವೆ. ಜಾತ್ಯಾತೀತ ರಾಷ್ಟ್ರವನ್ನ ಕಳೆದ 6 ವರ್ಷದಲ್ಲಿ ಸಾಕಷ್ಟು ಹಾಳು ಮಾಡಿದ್ದಾರೆ. ಇವರಿಗೆ ಹೀಗೆ ಬಿಟ್ಟರೆ ಅರಾಜಕತೆ ಉಂಟಾಗುತ್ತದೆ. ಇದನ್ನು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಕನಿಷ್ಠ ಸಾಮಾಜಿಕ ಜಾಲತಾಣಗಳಲ್ಲಾದ್ರೂ ವ್ಯವಸ್ಥೆಯನ್ನು ಪ್ರಶ್ನಿಸಬೇಕು ಎಂದರು.
ನಾನು ಯಾವುದೇ ಒತ್ತಡದಲ್ಲಿ ವೃತ್ತಿಗೆ ರಾಜೀನಾಮೆ ನೀಡಿಲ್ಲ. ನಾನು ಡಿಸಿಯಾಗಿ ಕೇಂದ್ರ ಸರ್ಕಾರದ ಆಡಳಿತವನ್ನು ಪ್ರಶ್ನಿಸಲು ಆಗುವುದಿಲ್ಲ. ಅದಕ್ಕೆ ರಾಜೀನಾಮೆ ನೀಡಿದ್ದೇನೆ. ಈಗ ನಾನು ಮುಕ್ತವಾಗಿ ಟೀಕೆ ಮಾಡಬಹುದು. ನಾನು ಆಡಳಿತದಲ್ಲಿದ್ದುಕೊಂಡು ಸಾಕಷ್ಟು ತಿಳಿದುಕೊಂಡಿದ್ದೇನೆ. ಇದು ಸಾರ್ವಜನಿಕರಿಗೂ ಗೊತ್ತಾಗಬೇಕು. ದೇಶದ ಪರಿಸ್ಥಿತಿ ಅರಿಯಲು ಮುಂದಾಗಬೇಕು. ಎನ್‌ಆರ್‌ಸಿ ಮೂಲಕ ಕೇಂದ್ರ ಸರ್ಕಾರ ದೇಶದ ಪ್ರಜೆಗಳ ಐಡಿಂಟಿಟಿ ಮಾಡಲು ಹೊರಟಿದ್ದಾರೆ. ಇದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನವನ್ನು ಬದಲಾಯಿಸಲು ಹೊರಟಿದ್ದಾರೆ. ಕಳೆದ 6 ವರ್ಷದಲ್ಲಿ ಸಂವಿಧಾನ ಬಾಹಿರವಾದ ಕೆಲಸಕ್ಕೆ ಕೈ ಹಾಕಿದ್ದು, ಅವರ ಪ್ರಯತ್ನವನ್ನು ತಡೆಯಲು ಮುಂದಾಗಬೇಕು ಎಂದು ಕರೆ ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.