ರಾಯಚೂರು: ಮುಂಜಾಗ್ರತಾ ಕ್ರಮವಾಗಿ ನಗರದ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್ ತಪಾಸಣೆ ಪರೀಕ್ಷೆಯಲ್ಲಿ ಒಳಪಡುವುದು ಕಡ್ಡಾಯಗೊಳಿಸಿದ್ದು, ನ್ಯಾಯಾಲಯದ ಆವರಣದಲ್ಲಿ ರ‍್ಯಾಪಿಡ್ ಆಂಟಿಜೆನ್ ಕಿಟ್ ತಪಾಸಣೆ ಕೇಂದ್ರ ತೆರೆಯಲಾಗಿದೆ.
ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬ ಕಕ್ಷಿದಾರರು, ನ್ಯಾಯವಾದಿಗಳು ಹಾಗೂ ಅಧಿಕಾರಿಗಳು ರ‍್ಯಾಪಿಡ್ ಕೋವಿಡ್ ಟೆಸ್ಟ್ ಗೆ ಒಳಪಡುವುದು ಇಲ್ಲಿ ಕಡ್ಡಾಯವಾಗಿದೆ. ನ್ಯಾಯಾಲಯ ಆವರಣದಲ್ಲಿ ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯದ್ವಾರದ ಮೂಲಕ ಆಗಮಿಸುವ ಪ್ರತಿಯೊಬ್ಬ ಕಕ್ಷಿದಾರರು ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ತಂಡ ಕಾರ್ಯ ನಿರ್ವಹಿಸುತ್ತಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಸಮಯಕ್ಕೆ ಅವಶ್ಯಕ ಇರುವ ಕಕ್ಷಿದಾರರನ್ನು ಮಾತ್ರ ಆದ್ಯತೆ ಮೇರೆಗೆ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ನಿತ್ಯ ನೂರಕ್ಕೂ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಲ್ಲದೇ ನ್ಯಾಯಾಲಯದ ಆವರಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಗೆ ಮೊದಲ ಆದ್ಯತೆ ನೀಡಲಾಗಿದೆ.