ರಾಯಚೂರು: ಕೊರೊನಾ ಸೋಂಕಿನಿಂದ ನಿಧನ ಹೊಂದಿದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ನಗರದ ಹೊರವಲಯದ ಪೊತಗಲ್ ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ನಗರಕ್ಕೆ ಪಾರ್ಥಿವ ಶರೀರ ತರುತ್ತಿದ್ದಂತೆ ಜಿಲ್ಲಾಡಳಿತದಿಂದ ಬರ ಮಾಡಿಕೊಳ್ಳಲಾಯಿತು. ಬಳಿಕ ನಿಗದಿತ ಸ್ಥಳದಲ್ಲಿ ಸವಿತಾ ಸಮಾಜದ ಪ್ರಕಾರ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ರಾಷ್ಟ್ರಗೀತೆಯ ಮೂಲಕ ಪೊಲೀಸರು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಕೊರೊನಾ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸುವವರು ಪಿಪಿಇ ಕಿಟ್ ಧರಿಸಿದ್ದರು. ಅಶೋಕ್ ಗಸ್ತಿಯವರ ಹಿರಿಯ ಪುತ್ರಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಅಂತ್ಯಕ್ರಿಯೆ ವೇಳೆ ಶಾಸಕ ಡಾ. ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಎಸ್ಪಿ ನಿಕ್ಕಂ ಪ್ರಕಾಶ್, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಮಾಜಿ ಶಾಸಕರು, ಬಿಜೆಪಿ ಮುಖಂಡರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು. ಬಳಿಕ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಮಾತನಾಡಿ, ಕೋವಿಡ್-19 ಮಾರ್ಗಸೂಚಿ ಅನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ತಿಳಿಸಿದರು.