ರಾಯಚೂರು: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಭೇಟಿ ನೀಡಿ ಬೆಳೆ ಹಾನಿಯಾದ ಜಮೀನುಗಳನ್ನ ಪರಿಶೀಲನೆ ನಡೆಸಿದರು. ಇದೇ ವೇಳೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ರು.
ಲಿಂಗಸೂಗೂರು ತಾಲೂಕಿನ ಯರಗೋಡಿ, ಕಡದರಗಡ್ಡಿ, ಯಳಗೊಂದಿ ಗ್ರಾಮಗಳಿಗೆ ಭೇಟಿ ಮಾಡಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಮ್ಯಾದರಗಡ್ಡಿ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರ ಗಂಜಿ ಕೇಂದ್ರಕ್ಕೆ ತೆರಳಿದ್ರು. ಸಂತ್ರಸ್ತರಿಗೆ ಬೇಡ್ ಶೀಟ್, ಬಿಸ್ಕೆಟ್ ವಿತರಿಸಿದ್ರು. ಅಲ್ಲದೇ ದೇವಮ್ಮ ಎನ್ನುವ ಸಂತ್ರಸ್ತರಿಗೆ 30 ಸಾವಿರ ರೂ. ಹಣ ನೀಡಿದ್ರು. ಅಲ್ಲದೇ, ಕರಕಲ್‌ಗಡ್ಡಿಯಲ್ಲಿ ಸಿಲುಕಿರುವ 6 ಜನ ಸಂತ್ರಸ್ತರಿರುವ ಸ್ಥಳ ವೀಕ್ಷಿಸಿ, ಅವರನ್ನು ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ, ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಆಗಿರುವ ಹಾನಿ ಪರಿಶೀಲಿಸಿ, ಸೂಕ್ತ ಪರಿಹಾರ ಒದಗಿಸುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೃಷ್ಣ ನದಿ ಉಕ್ಕಿ ಹರಿದಾಗ ಪ್ರತಿಬಾರಿ ಆಗುತ್ತಿರುವ ಈ ಸಮಸ್ಯೆಯಿಂದ ಶಾಶ್ವತ ಯೋಜನೆ ಸಿದ್ದಪಡಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.