ರಾಯಚೂರು: ನಗರಸಭೆ ನಿರ್ಲಕ್ಷ್ಯದಿಂದ ಚರಂಡಿಯಲ್ಲಿ ಹರಿಯಬೇಕಿದ್ದ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲದೆ, ಕಾಲೋನಿಗಳಿಗೂ ಚರಂಡಿ ನೀರು ನುಗ್ಗಿದ್ದು, ಮೊಣಕಾಲುವರೆಗೂ ನಿಂತ ನೀರಿನಲ್ಲಿ ದಾರಿ ಹುಡುಕುತ್ತ ಅಲೆಯಬೇಕಾದ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ಬಂದೊದಗಿದೆ.
ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯಿಂದ ಕೆಲವು ಕಡೆ ಚರಂಡಿ ನೀರು ಮನೆಯೊಳಗೆ ನುಗ್ಗಿ ಜನರು ತೊಂದರೆ ಅನುಭವಿಸುವಂತೆ ಮಾಡಿದೆ. ಇಷ್ಟಾದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯನ್ನ ಸಾರ್ವಜನಿಕರು ಎದುರಿಸುತ್ತಿದ್ದಾರೆ.
ನಗರದ 31 ವಾರ್ಡ್ಗಳ ಚರಂಡಿ ನೀರು ಮಂಚಾಲಪುರ ಗ್ರಾಮದ ಕೆರೆಗೆ ಸೇರ್ಪಡೆಯಾಗುತ್ತದೆ. ಅಲ್ಲಿಯೂ ಸಹ ಯಾವುದೇ ಬ್ಲಿಚಿಂಗ್ ಪೌಡರ್ ಸಿಂಪಡಣೆ, ಸ್ಯಾನಿಟೈಜೇಶನ್ ಮಾಡುವುದಾಗಲಿ ಕಂಡು ಬಂದಿಲ್ಲ.
ಹಲವು ವರ್ಷಗಳಿಂದ ನನಡೆಯುತ್ತಿರುವ ಒಳಚರಂಡಿ ಕಾಮಗಾರಿ ಪೂರ್ಣವಾಗದಿರುವುದು ಇದಕ್ಕೆ ಕಾರಣ. ಹೀಗಾಗಿ ತರೆದ ಚರಂಡಿ ಮೂಲಕ ಗೃಹ ಬಳಕೆ ನೀರು ಹಾಗೂ ಮಳೆ ನೀರು ಹರಿಯುತ್ತಿದೆ. ರಾಜಕಾಲುವೆಯು ಒತ್ತುವರಿಯಾಗಿದ್ದು, ನಗರದ ಕೆಲವೊಂದು ಬಡಾವಣೆಗಳು ಮಳೆ ಬಂದ್ರೆ ಸಾಕು ಸಂಪೂರ್ಣ ಜಲಾವೃತವಾಗುತ್ತಿವೆ.
ನಗರಸಭೆಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಟೆಂಡರ್ ಮೂಲಕ 10 ಪ್ಯಾಕೇಜ್ ಮೂಲಕ ಚರಂಡಿ ನಿರ್ವಹಣೆ ಮಾಡಲಾಗುತ್ತದೆ. ಇದೀಗ ಕೊರೊನಾ ಕಾರ್ಯಕ್ಕೆ ಪೌರಕಾರ್ಮಿಕರನ್ನ ನಿಯೋಜನೆ ಮಾಡಿರುವುದರಿಂದ ಕಾರ್ಮಿಕರ ಕೊರತೆಯೂ ಸಹ ಇದೆ.