ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಡಿ 800 ಕುಟುಂಬಗಳಿಗೆ ಜಾಬ್ ಕಾರ್ಡ್ ಹಾಗೂ 3200 ಕುಟುಂಬಗಳಿಗೆ ಹಣ ಜಮೆಯಾಗಿಲ್ಲ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘ ( ಗ್ರಾಕೂಸ್) ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ದೇವದುರ್ಗ, ಮಾನ್ವಿ, ಸಿಂಧನೂರು ಸೇರಿ ಜಿಲ್ಲೆಯ 5 ತಾಲೂಕುಗಳ ಕಾರ್ಮಿಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಪಂಚಾಯತ್ ಸಭೆ ಮಾಡಿ ಹಲವು ಬಾರಿ ಚರ್ಚೆ ಮಾಡಿದರೂ ವೇತನ ಪಾವತಿ ಮಾಡಿಲ್ಲ. 5 ಸಾವಿರ ಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ ಕೆಲಸ ನೀಡಿಲ್ಲ. ಕೂಲಿ ಕಾರ್ಮಿಕರಿಗೆ ಹಣ ಜಮಾ ಆಗಿಲ್ಲ. ಕೆಲಸ ವಂಚಿತ ಕಾರ್ಮಿಕರು ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಿದರೂ ನೀಡುತ್ತಿಲ್ಲ. ಅಲ್ಲದೆ 100 ದಿನ ಕೆಲಸ ನೀಡದೇ ದಾಖಲೆಗಳಲ್ಲಿ ಮಾತ್ರ ತೋರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.