ರಾಯಚೂರು: ಈಗಾಗಲೇ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಲು ಶುರುವಾಗಿದೆ. ಇಂದು ಕಾರ ಹುಣ್ಣಿಮೆಯಾದ ಪ್ರಯುಕ್ತ ರೈತರು ತಮ್ಮ ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಸ್ಥಳೀಯ ಮಾರುಕಟ್ಟೆಗೆ ಮುಗಿಬಿದ್ದ ದೃಶ್ಯ ಕಂಡುಬಂತು.
ನಗರದ ಮಾರುಕಟ್ಟೆಯಲ್ಲಿ ನಿನ್ನೆಯಿಂದ ರೈತರು ತಮ್ಮ ಜಾನುವಾರುಗಳಿಗಾಗಿ ದಾಂಡ, ಮಗಡ, ಕೊಮ್ಮೆಣಸು, ಗೆಜ್ಜೆಸರ, ಗಂಟೆ, ಸರಪಳಿ, ಜೂಲಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷಗಳಿಂದ ಮಳೆಯ ಕೊರತೆ ಉಂಟಾಗಿದ್ದು, ತೀವ್ರ ಬರ ಆವರಿಸಿತ್ತು. ಈ ವರ್ಷವೂ ಸಹ ಮುಂಗಾರು ಬಾರದೇ ರೈತರನ್ನು ಚಿಂತೆಗೀಡು ಮಾಡಿದ್ದು, ಬರದ ನಡುವೆಯೂ ಒಂದಿಷ್ಟು ಚೌಕಾಸಿ ಮಾಡಿ ಕಾರ ಹುಣ್ಣಿಮೆ ಆಚರಿಸಿದ್ದಾರೆ.
ಒಂದೆಡೆ ಬರ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ್ರು ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲೇ ಬೇಕೆಂಬ ಅನಿವಾರ್ಯತೆಯಿಂದ ಬೆಲೆ ಹೆಚ್ಚಾದರೂ ಸಹ ವಸ್ತುಗಳನ್ನು ಖರೀದಿಸಿ ಹೊಲಗಳಲ್ಲಿ ವರ್ಷ ಪೂರ್ತಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಎತ್ತುಗಳನ್ನು ಸಿಂಗಾರ ಮಾಡಿ ಪೂಜೆ ಸಲ್ಲಿಸಿದ್ದಾರೆ.