ರಾಯಚೂರು: ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರಿಂದ ಅಲ್ಪಸಂಖ್ಯಾತರಿಗೆ ಮೋಸ ಮಾಡಿರುವುದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಬಷಿರುದ್ದೀನ್ ಹೇಳಿದ್ದಾರೆ.
ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಯಚೂರು ನಗರಸಭೆಗೆ ಇತ್ತೀಚೆಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಈ ವೇಳೆ, ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ನೀಡುವ ಭರವಸೆಯನ್ನ ಕಾಂಗ್ರೆಸ್ ಮುಖಂಡರು ನೀಡಿದ್ರು. ಆದ್ರೆ ಈ ವಿನಯಕುಮಾರ ಅವರಿಂದ ಕಾಂಗ್ರೆಸ್ ಮುಖಂಡರು, ಸದಸ್ಯರು ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡು, ಕೊನೆ ಘಳಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನಗರಸಭೆ ಸದಸ್ಯ ಸಾಜೀದ್ ಸಮೀರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡದೇ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ. ಮೂರು ಪಕ್ಷದ ಮುಖಂಡರು ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರೆ. ಇದನ್ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ವಿನಯಕುಮಾರ್ ತಮಗೆ ಹೇಳಿದ್ದಾರೆ. ಎಲ್ಲ ಮುಖಂಡರಿಗೂ, ಸದಸ್ಯರು ಸೇರಿ ಒಟ್ಟು 6 ರಿಂದ 7 ಕೋಟಿ ರೂಪಾಯಿ ಹಂಚಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತದೆ ಎನ್ನುವ ಆರೋಪವಿದೆ. ಆದ್ರೆ ರಾಯಚೂರು ಜಿಲ್ಲೆಯ ಕಾಂಗ್ರೆಸ್ ಲೀಡರ್ಗಳು ಪರೋಕ್ಷವಾಗಿ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡರ ಈ ವಿರೋಧಿ ಧೋರಣೆಯನ್ನ ಖಂಡಿಸಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನ.2ರಂದು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ರು.