ರಾಯಚೂರು: ಈ ವರ್ಷವೂ ಕೃಷ್ಣಾ ನದಿ ಪ್ರವಾಹ ಬಂದಿದ್ದು, ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಿದೆ. ಆದ್ರೆ ಗ್ರಾಮದಲ್ಲಿನ ರಸ್ತೆಗಳು ಸುಧಾರಣೆಯಾಗಿಲ್ಲ. ಆ್ಯಂಬುಲೆನ್ಸ್ಗೆ ದಾರಿ ತೋರಿಸಿದ ಸೇತುವೆ ಶಿಥಿಲಗೊಂಡು, ಎರಡೂ ಬದಿಯಲ್ಲಿ ಬಿರುಕು ಬಿಟ್ಟಿದೆ. ನೀಡಿದ ಭರವಸೆಯಂತೆ ಗ್ರಾಮದ ರಸ್ತೆ ಹಾಗೂ ಸೇತುವೆಯನ್ನು ದುರಸ್ತಿ ಮಾಡುವಂತೆ ಬಾಲಕ ವೆಂಕಟೇಶ್ ಮನವಿ ಮಾಡಿದ್ದಾನೆ.
ಕಳೆದ ವರ್ಷ ಕೃಷ್ಣಾ ನದಿಗೆ 5 ಲಕ್ಷ ಕ್ಯುಸೆಕ್ ನೀರು ಬಿಡಲಾಗಿತ್ತು. ಇದರ ಪರಿಣಾಮ ಹಿರೇರಾಯಕೂಪಿ ಮಾರ್ಗವಾಗಿ ರಾಯಚೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿ, ಗ್ರಾಮಕ್ಕೆ ನೀರು ನುಗ್ಗಿತ್ತು. ಆದ್ರೆ ಅದೇ ಮಾರ್ಗವಾಗಿ ಯಾದಗಿರಿ ಮೂಲಕ ರಾಯಚೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಚಾಲಕನಿಗೆ ರಸ್ತೆ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ವೆಂಕಟೇಶ್ ಹರಿಯುವ ನೀರನ್ನು ಲೆಕ್ಕಿಸದೆ ಸೇತುವೆ ಮೇಲೆ ಆ್ಯಂಬುಲೆನ್ಸ್ಗೆ ದಾರಿ ತೋರಿಸುವ ಮೂಲಕ ಸಾಹಸ ತೋರಿದ್ದ. ಈ ಕಾರ್ಯಕ್ಕೆ ಅವನಿಗೆ ಕೇಂದ್ರ ಸರ್ಕಾರದಿಂದ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು.
ಬಾಲಕ ವೆಂಕಟೇಶ್ ಸಾಹಸವನ್ನು ಮೆಚ್ಚಿ ಸಂಘ-ಸಂಸ್ಥೆಗಳು ವಿದ್ಯಾಭ್ಯಾಸ ನೀಡುವ ಭರವಸೆ ನೀಡಿದ್ದರು. ಖಾಸಗಿ ಸಂಸ್ಥೆ ಸಹ ಬಾಲಕನಿಗೆ ಮನೆ ಕಟ್ಟಿಕೊಡಲು ಮುಂದಾಗಿ, ಮನೆ ನಿರ್ಮಾಣ ಕಾರ್ಯ ನಡೆದಿದೆ. ಆದ್ರೆ ಮನೆಯ ನಿರ್ಮಾಣ ಸಂಪೂರ್ಣವಾಗದೆ ನೆನೆಗುದಿದೆ ಬಿದ್ದಿದೆ.
ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನಾರಾಯಣಪುರ ಜಲಾಶಯದಿಂದ 2.96 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ಹಿರೇರಾಯಕೂಪಿ ಗ್ರಾಮಕ್ಕೆ ನೀರು ನುಗ್ಗುವ, ಸೇತುವೆ ಮುಳಗಡೆಯಾಗುವ ಹಾಗೂ ಹಾಳಾಗಿರುವ ರಸ್ತೆ ಮತ್ತಷ್ಟು ಹಾಳಾಗುವ ಭೀತಿ ಎದುರಾಗಿದೆ. ಗ್ರಾಮದ ರಸ್ತೆ, ಸೇತುವೆ ದುರಸ್ತಿಗೊಳಿಸಿ, ಖಾಸಗಿ ಸಂಘ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸುವಂತೆ ಬಾಲಕ ವೆಂಕಟೇಶ್ ಮನವಿ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ.