ರಾಯಚೂರು: ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ಅಘೋಷಿತ ಸ್ಲಂಗಳನ್ನುಅಧಿಕೃತವಾಗಿ ಸ್ಲಂ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆ ಸದಸ್ಯರು, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸರ್ತಿಗೇರಿ, ಮೊಹಮ್ಮದ್ ನಗರ, ಯಕ್ಲಾಸಪುರ, ಕುಲುಸುಂಬಿ ಕಾಲೋನಿ, ಪೋತಗಲ್, ಅಮರಾವತಿ, ಟೀಚರ್ಸ್ ಕಾಲೋನಿ, ಹೊಸೂರು ಜನತಾ ಕಾಲೋನಿ ಸೇರಿದಂತೆ 60ಕ್ಕೂ ಹೆಚ್ಚು ಅಘೋಷಿತ ಸ್ಲಂಗಳನ್ನು ಅಧಿಕೃತವಾಗಿ ಸ್ಲಂ ಎಂದು ಘೋಷಣೆ ಮಾಡಬೇಕು ಮತ್ತು ಮೂಲಭೂತ ಸೌಕರ್ಯ ನೀಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ನಿವೇಶನ ರಹಿತ ಬಡ ಕುಟುಂಬಗಳು ಬೀದಿ ಬದಿಯಲ್ಲಿ, ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ಪೈಕಿ 960 ಕುಟುಂಬಗಳಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ನಿವೇಶನ ಹಕ್ಕು ಪತ್ರ ನೀಡಿದ್ದು, ಆದರೆ ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ನಿವೇಶನ ಅಭಿವೃದ್ಧಿಪಡಿಸಲು ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಒತ್ತಡ ಹೇರಿದರೆ, ಅನುದಾನ ಇಲ್ಲ ಎಂಬ ಹಾರಿಕೆಯ ಉತ್ತರ ನೀಡುತಿದ್ದಾರೆ ಎಂದು ಆರೋಪಿಸಿದರು.