ರಾಯಚೂರು: ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ಹಾಗಾಗಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ನೀಡಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕೇಂದ್ರ ಸರ್ಕಾರದ ಕೋವಿಡ್-19 ಮಾರ್ಗಸೂಚಿ ಅನ್ವಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ನೀಡಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 30,413 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದಾನಿಗಳ ನೆರವು ಹಾಗೂ ಇಲಾಖೆಯ ಸಹಾಯ ಪಡೆದುಕೊಂಡು ಸ್ಕೌಟ್ಸ್ ಮತ್ತು ಗೈಡ್ಸ್ ಉಚಿತ ಮಾಸ್ಕ್ ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ರಾಯಚೂರು ತಾಲೂಕಿಗೆ 9 ಸಾವಿರ, ಸಿಂಧನೂರು ತಾಲೂಕಿಗೆ 6 ಸಾವಿರ, ಮಾನ್ವಿ, ಮಸ್ಕಿ, ಲಿಂಗಸೂಗುರು ತಾಲೂಕುಗಳಿಗೆ ತಲಾ 5 ಸಾವಿರ, ದೇವದುರ್ಗ ತಾಲೂಕಿಗೆ 4 ಸಾವಿರ ಸೇರಿದಂತೆ 34 ಸಾವಿರ ಮಾಸ್ಕ್ಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಿದ್ದು, ಅವುಗಳನ್ನು ಪರೀಕ್ಷೆ ದಿನದಂದು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.