ರಾಯಚೂರು: ಯರಮರಸ್ ಸೂಪರ್ ಕ್ರಿಟಿಕಲ್ ಪವರ್ ಸ್ಟೇಷನ್ (ವೈಟಿಪಿಎಸ್) ಅನ್ನು ಹೈದರಾಬಾದ್ ಮೂಲದ ಖಾಸಗಿ ಕಂಪನಿಗೆ (ಪವರ್ ಮ್ಯಾಕ್ ಕಂಪನಿಗೆ) ವಹಿಸಲು ನಿರ್ಧರಿಸಿ. ಆ ಕಂಪನಿಗೆ ಮುಖ್ಯ ಇಂಜಿನಿಯರ್ ಪತ್ರ ಬರೆದಿದ್ದಾರೆ. ಇದರಿಂದ ಸಾವಿರಾರು ಕಾರ್ಮಿಕರಲ್ಲಿ ಆತಂಕ ಎದುರಾಗಿದೆ.
ಯರಮರಸ್ ಹೊರವಲಯದಲ್ಲಿ ಆತ್ಯಾಧುನಿಕ ಶೈಲಿಯ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ 2 ಘಟಕಗಳನ್ನು ಸ್ಥಾಪಿಸಲಾಗಿದೆ. 8 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಆದರೆ, ನಿರ್ಮಾಣದ ವೆಚ್ಚ ಈಗ 8 ಸಾವಿರ ಕೋಟಿಯಿಂದ ₹13 ಸಾವಿರ ಕೋಟಿಗೆ ಏರಿಕೆಯಾಗಿದ್ದು ನಿರ್ವಹಣೆ ದುಸ್ತರವಾಗಿದೆ.
ಇನ್ನು ನೀಡಿದ ಭರವಸೆಯಂತೆ ಭೂಮಿ ಕೊಟ್ಟವರಿಗೆ ಉದ್ಯೋಗ ನೀಡಿಲ್ಲ. ಹೀಗಾಗಿ ಸರ್ಕಾರ ಕಳೆದ ವರ್ಷ ಇದೇ ಪವರ್ ಮ್ಯಾಕ್ ಕಂಪನಿಗೆ ವೈಟಿಪಿಎಸ್ ಅನ್ನು ವಹಿಸಲು ಮುಂದಾದಾಗಿತ್ತು. ಆಗ ಕಾರ್ಮಿಕರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ನಿರ್ಧಾರವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಅದೇ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಇದು ಕಾರ್ಮಿಕರಲ್ಲಿ ಮತ್ತೆ ಆತಂಕ ಶುರುವಾಗುವಂತೆ ಮಾಡಿದೆ.