ಲಿಂಗಸುಗೂರು: ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಪೊಳ್ಳು ಭರವಸೆಗೆ ಬೇಸತ್ತ ನಾಗರಿಕರು ಸ್ವಂತ ಹಣದಲ್ಲಿ ರಸ್ತೆ ಸರಿಪಡಿಸಲು ಮುಂದಾಗಿರುವ ಘಟನೆ ತಾಲೂಕಿನ ಆಶ್ರಯ ಬಡಾವಣೆಯಲ್ಲಿ ಕಂಡುಬಂದಿದೆ.
ಲಿಂಗಸುಗೂರು ತಾಲ್ಲೂಕು ಕೇಂದ್ರದ ಗುರುಗುಂಟಾ ರಸ್ತೆಯಲ್ಲಿರುವ ಆಶ್ರಯ ಬಡಾವಣೆ ಮತ್ತು ಸಂಪರ್ಕ ಕಲ್ಪಿಸುವ ಬಡಾವಣೆ ಜನತೆ 1995 ರಿಂದ ರಸ್ತೆ ಚರಂಡಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ ಮಾಡುತ್ತಾ ಬಂದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಕ್ಷೇತ್ರ ಅಭಿವೃದ್ಧಿ ಹರಿಕಾರರು ಎಂದು ಬ್ಯಾನರ್ ಹಾಕುವ ಪ್ರತಿನಿಧಿಗಳು, ಸರ್ಕಾರಿ ಯೋಜನೆಗಳನ್ನು ಪ್ರಾಮಾಣಿಕವಾಗಿ ನಾಗರಿಕರ ಮನೆ ಬಾಗಿಲಿಗೆ ಮುಟ್ಟಿಸಿದ್ದೇವೆ ಎಂದು ಹೇಳುವ ಅಧಿಕಾರಿಗಳು ಸೌಜನ್ಯತೆಗೂ ಜನರ ಸಮಸ್ಯೆ ಆಲಿಸಲು ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಆಶ್ರಯ ಬಡಾವಣೆ ಪ್ರವೇಶಿಸಲು ಮುಂದಾದರೆ ಮುಳ್ಳು ಜಾಲಿ, ಕಲುಷಿತ ನೀರಿನ ದುರ್ನಾತ, ತಗ್ಗು ಗುಂಡಿಗಳಿಂದ ಸರಳವಾಗಿ ನಡೆಯಲಾಗದ ರಸ್ತೆಗಳು ಕಾಣಸಿಗುತ್ತವೆ. ಹೀಗಾಗಿ ಇಲ್ಲಿನ ನಾಗರಿಕರೇ ಸ್ವಂತ ಹಣದಲ್ಲಿ ರಸ್ತೆ ದುರಸ್ತಿಗೆ ಮುಂದಾಗಿದ್ದು, ಈಗಲಾದರೂ ಆಡಳಿತ ವ್ಯವಸ್ಥೆ ಎಚ್ಚೆತ್ತು ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗುವುದೇ ಎಂದು ಕಾದು ನೋಡಬೇಕಿದೆ.
ಬಡಾವಣೆ ನಿವಾಸಿ ಹನುಮಂತಪ್ಪ ಬೆಂಡೋಣಿ ಮಾತನಾಡಿ, ಈ ಪ್ರದೇಶದ ಬಡಾವಣೆಗಳ ಅಭಿವೃದ್ಧಿ, ಅಗತ್ಯ ಸೌಲಭ್ಯ ಕಲ್ಪಿಸಲು ಆಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಬೇಸತ್ತಿರುವ ನಾವು ರಸ್ತೆ ದುರಸ್ತಿಗೆ ಮುಂದಾಗಿದ್ದೇವೆ ಎಂದು ಅಳಲು ತೋಡಿಕೊಂಡರು.