ರಾಯಚೂರು: ಬಳ್ಳಾರಿಯ ಜಿಲ್ಲೆ ಕಂಪ್ಲಿಯ ವ್ಯಕ್ತಿಯೋರ್ವನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಗ್ರೀನ್ ಝೋನ್ನಲ್ಲಿರುವ ಜಿಲ್ಲೆಯಲ್ಲಿ ಕೊರೊನಾ ಆತಂಕ ಶುರುವಾಗಿದೆ.
ಕೊರೊನಾ ಪಾಸಿಟಿವ್ ಬಂದಿರುವ ಕಂಪ್ಲಿಯ ವ್ಯಕ್ತಿ 2020 ಮೇ 5ರಂದು ಬೆಂಗಳೂರಿನಿಂದ ಬಸ್ ಸಂಖ್ಯೆ ಕೆಎ-37 ಎಫ್ -0887 ರಲ್ಲಿ ಗಂಗಾವತಿಗೆ ಪ್ರಯಾಣ ಬೆಳೆಸಿದ್ದ. ಈತನ ಜೊತೆ ಜಿಲ್ಲೆಯ ಬಳಗಾನೂರು, ಸಿಂಧನೂರು ಪಟ್ಟಣದ ಸುಖಾಲಪೇಟೆಯ ವ್ಯಕ್ತಿಗಳು ಪ್ರಯಾಣ ಮಾಡಿದ್ದಾರೆ. ಅಲ್ಲದೆ, ಈತನೊಂದಿಗೆ ಪ್ರಯಾಣಿಸಿದ್ದ ಕೊಪ್ಪಳ ಜಿಲ್ಲೆ ತಾವರಗೆರೆ ಮೂಲದ ವ್ಯಕ್ತಿ ಕೂಡ ಜಿಲ್ಲೆಯ ಹಾರಪುರ ಗ್ರಾಮದಲ್ಲಿ ಓಡಾಡಿದ್ದಾನೆ. ಹೀಗಾಗಿ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದವರಿಗೆ ಎಲ್ಲಿ ಸೋಂಕು ತಗುಲುತ್ತದೋ ಎಂಬ ಭಯ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಹೀಗಾಗಿ ಸೋಮವಾರ ರಾತ್ರಿಯಿಡಿ ಕಾರ್ಯಚರಣೆ ನಡೆಸಿದ ಜಿಲ್ಲಾಡಳಿತ ಕಂಪ್ಲಿಯ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಮೂವರನ್ನು ಐಸೋಲೇಟ್ ಮಾಡಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಿದ್ದಾರೆ.