ರಾಯಚೂರು : ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆದ ಗ್ರಾಪಂ ಚುನಾವಣೆಯ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಗೆ ಗೌರವ ಧನ ನೀಡಬೇಕು ಎನ್ನುವ ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಚುನಾವಣೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯ ಚುನಾವಣಾ ಆಯೋಗದ ಆದೇಶ ಮೇರೆಗೆ ಗ್ರಾಪಂ ಚುನಾವಣೆ ಸಮಯದಲ್ಲಿ ಜಿಲ್ಲೆಯಲ್ಲಿ ಸುಮಾರು 1100 ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಚುನಾವಣೆಗೆ ಸಂಬಂಧಿಸಿದ ಕಾರ್ಯಗಳಾದ ನಾಮಪತ್ರ ಸಲ್ಲಿಕೆ ಸಮಯ, ಚುನಾವಣೆ ತರಬೇತಿ, ಮತದಾನದ ದಿನದಂದು ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸಿಂಗ್ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಚುನಾವಣೆಯ ಸ್ವಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರಿಗೆ ಎಷ್ಟೋ ಕಡೆ ಊಟ, ತಿಂಡಿ ಇಲ್ಲದೆ ಇದ್ದರೂ ಕರ್ತವ್ಯವನ್ನ ನಿಷ್ಠೆಯಿಂದ ಮಾಡಿದ್ದರು. ಇದರಲ್ಲಿ ಕೆಲವರು ಎರಡು-ಮೂರು ದಿನಗಳ ಕಾಲ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದು, ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ₹700 ಗೌರವ ಧನ ನೀಡಬೇಕು ಎನ್ನುವ ಆದೇಶಕ್ಕೆ ಚುನಾವಣೆ ಮುಗಿದ ಬಳಿಕ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಗೌರವ ಧನ ಪಾವತಿ ಕುರಿತು ಚುನಾವಣಾ ಅಧಿಕಾರಿಗಳನ್ನು ಕೇಳಿದರೆ ನಿಮಗೆ ಪ್ರತಿ ತಿಂಗಳು ಸಂಬಳ ನೀಡುತ್ತೇವೆ. ಏತಕ್ಕೆ ಗೌರವ ಧನ ನೀಡಬೇಕು ಎಂದು ಪ್ರತಿಕ್ರಿಯಿಸಿದ್ದು, ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.