ರಾಯಚೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ನೀಡಬೇಕಾದ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿರುತ್ತದೆ. ಆದರೆ ಜಿಲ್ಲೆಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಾಟಾಚಾರಕ್ಕೆ ಎಂಬಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿರುವ ರಿಮ್ಸ್ ಆಸ್ಪತ್ರೆಯ 536ನೇ ವಾರ್ಡ್ 126 ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಗ್ಲುಕೋಸ್ ಬಾಟಲಿಯನ್ನ ಹಾಕಿದರೆ ಅದು ಮುಗಿದ ಬಳಿಕ ಅದನ್ನ ವಾರ್ಡ್ಗಳಲ್ಲಿ ಶುಶ್ರೂಷಕರು, ವೈದ್ಯರು ತೆಗೆಯಬೇಕು. ಆದರೆ ವಾರ್ಡ್ನಲ್ಲಿ ಕಸ ಗುಡಿಸುವ ಮಹಿಳೆಯರೇ ಅದನ್ನ ತೆಗೆಯುವ ಮೂಲಕ, ಕಸ ಗುಡಿಸುವವರೇ ಶುಶ್ರೂಷಕರಾಗಿ ಕೆಲಸ ನಿರ್ವಹಿಸುವಂತಹ ವಾತಾವರಣ ನಿರ್ಮಾಣಗೊಂಡಿದೆ ಎನ್ನಲಾಗುತ್ತಿದೆ.
ಈ ಸಮಸ್ಯೆ ಬಗ್ಗೆ ವಿಭಾಗದ ಅಧಿಕಾರಿಗಳು ಗಮನ ಹರಿಸಿ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಚಿಕಿತ್ಸೆಗೆಂದು ದಾಖಲಾಗಿರುವ ರೋಗಿಗಳಿಗೆ ಆಯಾ ವಿಭಾಗದಲ್ಲಿ ಶುಶ್ರೂಷಕರು, ವೈದ್ಯರನ್ನ ನಿಯೋಜಿಸಿ ರೋಗಿಗಳ ಮೇಲೆ ನಿಗಾ ವಹಿಸಬೇಕು ಎಂಬುದು ಇಲ್ಲಿನ ರೋಗಿಗಳ ಕಡೆಯವರ ಆಗ್ರಹವಾಗಿದೆ.